
ಕೋಲಾರ, 19 ನವೆಂಬರ್ (ಹಿ.ಸ.)
ಕೋಲಾರದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರ ವೇತನ ತಾರತಮ್ಯ ಹಾಗೂ ಮೂಲಸೌಕರ್ಯ ಕೊರತೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಈಗಾಗಲೇ ಕಾರ್ಮಿಕ ಇಲಾಖೆ ಮೂಲಕ ಕಾರ್ಖಾನೆ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ. ಆರ್. ರವಿಕುಮಾರ್ ತಿಳಿಸಿದರು.
ಕಾರ್ಖಾನೆಯಲ್ಲಿ ಸುಮಾರು ೮೦೦-೯೦೦ ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರ ಬೇಡಿಕೆಗಳಲ್ಲಿ ನ್ಯಾಯವಿದೆ. ಕಳೆದ ೧೦ ವರ್ಷದಿಂದ ದುಡಿಯುತ್ತಿರುವ ಅನುಭವಿ ಕಾರ್ಮಿಕರಿಗೂ ಮತ್ತು ೧೦ ದಿನಗಳ ಹಿಂದೆ ಸೇರಿದ ಹೊಸಬರಿಗೂ ಒಂದೇ ಕನಿಷ್ಠ ವೇತನ ನೀಡುವುದು ಸರಿಯಾದ ಮಾನದಂಡವಲ್ಲ. ಕನಿಷ್ಠ ವೇತನ ಕಾಯ್ದೆ ಹೊಸಬರಿಗೆ ಅನ್ವಯಿಸುತ್ತದೆಯೇ ಹೊರತು, ನುರಿತ ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡಲೇಬೇಕು ಎಂದು ಡಿಸಿ ಪ್ರತಿಪಾದಿಸಿದರು.
ಕಾರ್ಖಾನೆಯಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಯುವತಿಯರು ಕೆಲಸ ಮಾಡುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆಗೆ ಡಿಎಚ್ಒ ದೃಢೀಕರಿಸಿದ ೧೦ ರಿಂದ ೧೨ ಮಂದಿ ಅರ್ಹ ಮಹಿಳಾ ವೈದ್ಯರನ್ನು ನೇಮಿಸಿಕೊಳ್ಳುವಂತೆ ಸೂಚಿಸಲಾಗಿದೆ. ೯೦೦ ಮಂದಿ ಕೆಲಸ ಮಾಡುವ ಕಾರ್ಖಾನೆಯಲ್ಲಿ ಕ್ಯಾಂಟೀನ್ ಸೌಲಭ್ಯವಿಲ್ಲದಿರುವುದು ಆಶ್ಚರ್ಯಕರವಾಗಿದ್ದು, ತಕ್ಷಣ ಕ್ಯಾಂಟೀನ್ ವ್ಯವಸ್ಥೆ ಹಾಗೂ ೧೦ ಕಿ.ಮೀ.ಗಿಂತ ದೂರದಿಂದ ಬರುವ ಕಾರ್ಮಿಕರಿಗೆ ಕಡ್ಡಾಯವಾಗಿ ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು.
ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ೮ನೇ ತಾರೀಖಿನವರೆಗೆ ಸಮಯಾವಕಾಶ ಕೇಳಿದ್ದು, ಅಂದು ಕಾರ್ಮಿಕರ ಪರ ನಿರ್ಧಾರ ಬಾರದಿದ್ದರೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಕಾನೂನು ಕ್ರಮ ಜರುಗಿಸಲಿದೆ ಎಂದು ಎಚ್ಚರಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್