
ಬೆಂಗಳೂರು, 19 ನವೆಂಬರ್ (ಹಿ.ಸ.):
ಮಹಾತ್ಮ ಬಸವಣ್ಣನ ವಿಚಾರ ಮತ್ತು ತತ್ವಗಳಿಗೆ ಅಪಚಾರ ಮಾಡುವಂತಿರುವ ಮತ್ತು ಸಂಶೋಧನೆಯ ಹೆಸರಿನಲ್ಲಿ ಲಿಂಗಾಯತ ಸಮುದಾಯ ಹಾಗೂ ಬಸವಾಭಿಮಾನಿಗಳಿಗೆ ನೋವುಂಟು ಮಾಡಿರುವ ರವಿ ಹಂಜ್ ಅವರ `ಬಸವ ಮಂಟಪ' ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು.
ಜತೆಗೆ, ಶಾಂತಿ ಕದಡುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಆಗ್ರಹಿಸಿದ್ದಾರೆ.
ರವಿ ಹಂಜ್ ಮತ್ತು ಅವರ ಪುಸ್ತಕದ ಪ್ರಕಾಶಕ, ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಸಮಿತಿಯ ನೇತೃತ್ವದಲ್ಲಿ ಗುರುವಾರ ಬಸವ ಭವನದಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದರ ಬೆನ್ನಲ್ಲೇ ಸಮಿತಿಯು ಹಂಜ್ ಮತ್ತು ಭಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಪೊಲೀಸರಿಗೆ ದೂರು ಕೊಟ್ಟಿದೆ.
ಬಸವಣ್ಣನ ವಿರುದ್ಧ ಮೊದಲಿನಿಂದಲೂ ಷಡ್ಯಂತ್ರ ನಡೆಯುತ್ತಲೇ ಇದೆ. ಸಮಾನತೆ, ಜಾತಿರಹಿತ ಸಮಾಜ, ಕಾಯಕ ತತ್ತ್ವ, ಸಂಸತ್ತಿನ ಪರಿಕಲ್ಪನೆ ಇವೆಲ್ಲವನ್ನೂ ಜಗತ್ತಿಗೆ ಸಾರಿದ ಬಸವಣ್ಣನನ್ನು ಕೊಲೆಗಡುಕ, ಕಳ್ಳ, ಲೋಟಿಕೋರ ಎಂದೆಲ್ಲ ರವಿ ಹಂಜ್ ವಾಗ್ದಾಳಿ ನಡೆಸಿದ್ದಾರೆ.
ಇದರ ಹಿಂದೆ ವಿಶ್ವೇಶ್ವರ ಭಟ್ ಅವರ ಕೈವಾಡವಿದೆ. ಆದರೆ ನಂತರ ಎದುರಾದ ವಿರೋಧವನ್ನು ಕಂಡು ಹಂಜ್ ಅವರು ಕ್ಷಮೆ ಮತ್ತು ತಿದ್ದುಪಡಿಯ ನಾಟಕವಾಡಿದ್ದಾರೆ.
ಅವೆರಡೂ ನಮಗೆ ಬೇಕಾಗಿಲ್ಲ. ನಮ್ಮ ವೀರಶೈವ-ಲಿಂಗಾಯತ ಸಮುದಾಯದ ಸೌಮ್ಯ ಸ್ವಭಾವವನ್ನೇ ದೌರ್ಬಲ್ಯ ಎಂದುಕೊಂಡಿದ್ದಾರೆ.
`ಬಸವ ಮಂಟಪ' ಕೃತ್ಯಕ್ಕೆ ಸಂಶೋಧನೆಯ ಮುಖವಾಡ ತೊಡಿಸಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
12ನೇ ಶತಮಾನದಲ್ಲಿ ನಡೆದ ಐತಿಹಾಸಿಕ ಸಂಘರ್ಷಗಳನ್ನು ಇವರು ದುರುದ್ದೇಶದಿಂದ ತಿರುಚುತ್ತಿದ್ದು, ಪೂರ್ವಗ್ರಹಪೀಡಿತರಾಗಿ ಮಾತನಾಡುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಕೂಡ ಬಸವಣ್ಣನನ್ನು ಮುಕ್ತವಾಗಿ ಪ್ರಶಂಸಿಸಿದ್ದಾರೆ.
ಈಗ ನಡೆಯುತ್ತಿರುವುದೆಲ್ಲವೂ ಶರಣ ತತ್ತ್ವ ಮತ್ತು ಲಿಂಗಾಯತ ಅಸ್ಮಿತೆಯನ್ನು ಬುಡಮೇಲು ಮಾಡುತ್ತಿರುವ ಸೈದ್ಧಾಂತಿಕ ಸಂಚಾಗಿದೆ. ಇದರ ಹಿಂದೆ ಯಾರ್ಯಾರಿದ್ದಾರೆ ಎನ್ನುವುದು ಗೊತ್ತಿದೆ.
ನಾಡಿನ ಪ್ರಜ್ಞಾವಂತರು, ಯುವಜನರು, ಮಠಾಧೀಶರು, ಸಾಹಿತಿಗಳು, ದೇಶ-ವಿದೇಶಗಳಲ್ಲಿರುವ ಎಲ್ಲ ಸಮುದಾಯಗಳೂ ಖಂಡಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.
ಬಸವಣ್ಣನನ್ನು `ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಸರಕಾರ ಘೋಷಿಸಿದ ಮೇಲೆ ಇಂತಹ ವಿಕೃತ ಬೆಳವಣಿಗೆಗಳು ಮೇರೆ ಮೀರಿವೆ. ಇವುಗಳ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಸಕ್ರಿಯವಾಗಿವೆ.
ಸಮಾಜದಲ್ಲಿ ಜಾಗೃತಿ ಮೂಡಿಸಿ, ಇದನ್ನೆಲ್ಲ ಮಟ್ಟ ಹಾಕಲಾಗುವುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಧೋರಣೆ ಸರಿಯಲ್ಲ ಎಂದು ಜತ್ತಿ ಪ್ರತಿಪಾದಿಸಿದ್ದಾರೆ.
ಆಳಂದ ಶಾಸಕ ಬಿ ಆರ್ ಪಾಟೀಲ ಮಾತನಾಡಿ, 'ಬಸವಣ್ಣ, ಗಾಂಧಿ, ಅಂಬೇಡ್ಕರ್ ವಿಚಾರಗಳನ್ನು ಸಹಿಸದ ವಿಕೃತಿ ಹಿಂದಿನಿಂದಲೂ ಇದೆ. ರವಿ ಹಂಜ್ ದುರುದ್ದೇಶದಿಂದ ಪುಸ್ತಕ ಬರೆದಿದ್ದು, ಬಸವಣ್ಣನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.
ಇದು ನಿಲ್ಲದಿದ್ದರೆ ಸಮಾಜದಲ್ಲಿ ಶಾಂತಿಗೆ ಭಂಗ ಬರುತ್ತದೆ. ಇದುವರೆಗೆ ಜಗತ್ತಿನ 143 ಭಾಷೆಗಳಿಗೆ ಬಸವಣ್ಣನ ವಚನಗಳು ಭಾಷಾಂತರವಾಗಿವೆ. ನಾವೀಗ ರಾಜ್ಯದಲ್ಲಿ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಗಿದೆ' ಎಂದರು.
ಬ್ರಿಟನ್ ನಲ್ಲಿ ಇರುವ ಕನ್ನಡಿಗ ನೀರಜ್ ಪಾಟೀಲ್, ಚಿಂತಕ ಜೆ ಎಸ್ ಪಾಟೀಲ್ ಅವರೂ ಮಾತನಾಡಿ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಮೇಯರ್ ಗಂಗಾಂಬಿಕ ಮಲ್ಲಿಕಾರ್ಜುನ್, ಮಾಜಿ ಉಪ ಮೇಯರ್ ಪುಟ್ಟರಾಜು ಮುಂತಾದವರು ಇದ್ದರು. ಇದಕ್ಕೂ ಮೊದಲು ನಡೆದ ಪೂರ್ವಭಾವಿ ಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ ಭಾಗವಹಿಸಿದ್ದರು.
ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಿಎಂ ಜತೆ ಚರ್ಚೆ: ಎಂ.ಬಿ.ಪಾಟೀಲ
ಬೆಂಗಳೂರು: ಬಸವಣ್ಣ ಮತ್ತು ಲಿಂಗಾಯತ ಸಮುದಾಯದ ಮೇಲಿನ ವಿಕೃತ ದಾಳಿ ಮೇರೆ ಮೀರಿದೆ. ಇದನ್ನೆಲ್ಲ ನಮ್ಮ ಸಮುದಾಯ ಇನ್ನು ಮುಂದೆ ಎಳ್ಳಷ್ಟೂ ಸಹಿಸುವುದಿಲ್ಲ. ಬದಲಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತೇವೆ. ಈಗಾಗಲೇ ಇದು ರಾಜ್ಯದ ಹಲವೆಡೆಗಳಲ್ಲಿ ಆರಂಭವಾಗಿದೆ.
ನೆರೆಯ ಮಹಾರಾಷ್ಟ್ರದಲ್ಲೂ ರವಿ ಹಂಜ್ ವಿರುದ್ಧ ಪ್ರತಿಭಟನೆ ಶುರುವಾಗಿದೆ. ಈ ಕುರಿತು ನಾನು ಮತ್ತು ಶರಣ್ ಪ್ರಕಾಶ ಪಾಟೀಲ ಸೇರಿದಂತೆ ಇತರ ಸಚಿವರು ಮುಖ್ಯಮಂತ್ರಿಗಳ ಜತೆ ಮಾತನಾಡಿ, ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಮತ್ತು ಸಮುದಾಯದ ಮುಖಂಡ ಎಂ ಬಿ ಪಾಟೀಲ ಎಚ್ಚರಿಕೆ ಕೊಟ್ಟಿದ್ದಾರೆ.
ಬಸವ ಸಮಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
'ನನಗೆ ರವಿ ಹಂಜ್ ಹೆಸರು ಹೇಳಲೂ ನಾಚಿಕೆಯಾಗುತ್ತಿದೆ. ಅಂತಹ ವ್ಯಕ್ತಿಯ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ವೀರಶೈವ ಮಹಾಸಭಾದ ಅಧ್ಯಕ್ಷ ಶಂಕರ ಬಿದರಿ ಮತ್ತು ಕಸಾಪ ಮಾಜಿ ಅಧ್ಯಕ್ಷ ಮನು ಬಳಿಗಾರ್ ಹೋಗಿರುವುದು ಖಂಡನೀಯ.
ಇವರಿಬ್ಬರೂ 21ನೇ ಶತಮಾನದ ಕೊಂಡಿ ಮಂಚಣ್ಣರು. ಬಿದರಿ ವಿರುದ್ಧ ಕ್ರಮ ಕೈಗೊಳ್ಳವುದು ವೀರಶೈವ ಮಹಾಸಭಾಗೆ ಬಿಟ್ಟಿದ್ದು.
ಇವರಂಥವರು 12ನೇ ಶತಮಾನದಿಂದಲೂ ಇದ್ದಾರೆ. ಇಂಥವರೇ ಆಗಲೂ ಬಸವಣ್ಣನ ವಿರುದ್ಧ ಕೆಲಸ ಮಾಡಿದರು' ಎಂದು ಅವರು ಹರಿಹಾಯ್ದರು.
'ಬಸವಣ್ಣ ಮತ್ತು ಶರಣ ಸಂಸ್ಕೃತಿಗೆ ಅಪಚಾರ ಮಾಡುತ್ತಿರುವುದರ ಹಿಂದೆ ಷಡ್ಯಂತ್ರವಿದೆ. ಉತ್ತರ ಕರ್ನಾಟಕದಲ್ಲೂ ಈ ಶಕ್ತಿಗಳು ಒಬ್ಬ ಸ್ವಾಮೀಜಿಯ ಮೂಲಕ ಈ ಕೆಲಸ ಮಾಡಿಸುತ್ತಿವೆ.
ಇವೆಲ್ಲದರ ವಿರುದ್ಧ ಸಿರಿಗೆರೆ, ಭಾಲ್ಕಿ, ಗದಗ, ಸುತ್ತೂರು ಸೇರಿದಂತೆ ಎಲ್ಲ ಸ್ವಾಮೀಜಿಗಳು ಧ್ವನಿ ಎತ್ತಲಿದ್ದಾರೆ. ಈಗಾಗಲೇ ಇದು ಆರಂಭವಾಗಿದೆ. ನಮ್ಮ ಧರ್ಮದ ತಂಟೆಗೆ ಬೇರೆಯವರು ಬಂದರೆ ನಾವಿನ್ನು ಸುಮ್ಮನಿರುವುದಿಲ್ಲ.
ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಇಬ್ಬರೂ ತಮ್ಮ ಮಿತಿ ಮೀರಿದ್ದಾರೆ' ಎಂದು ಅವರು ಟೀಕಿಸಿದ್ದಾರೆ.
'ಬೇರೆ ಸಮುದಾಯದ ಬಗ್ಗೆ ಹೀಗೇನಾದರೂ ಮಾಡಿದ್ದರೆ ಇಷ್ಟು ಹೊತ್ತಿಗೆ ಪರಿಣಾಮ ಬೇರೆಯಾಗುತ್ತಿತ್ತು.
ಹಿಂದೆ ಕೆಂಪೇಗೌಡರ ವಿಚಾರದಲ್ಲಿ ಉರಿಗೌಡ, ನಂಜೇಗೌಡ ಎನ್ನುವ ಕಾಲ್ಪನಿಕ ವ್ಯಕ್ತಿಗಳನ್ನು ಮುನ್ನೆಲೆಗೆ ತಂದಾಗ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಒಂದು ಎಚ್ಚರಿಕೆಗೆ ಆ ಆಟವೆಲ್ಲ ನಿಂತುಹೋಯಿತು.
ನಮ್ಮ ವೀರಶೈವ-ಲಿಂಗಾಯತ ಸಮುದಾಯ ಒಗ್ಗಟ್ಟಿನಿಂದ ಇರಬೇಕು. ಬಸವಣ್ಣನವರ ವಿಚಾರದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ' ಎಂದು ಅವರು ಸವಾಲೆಸೆದಿದ್ದಾರೆ.
'ಬಸವಣ್ಣ ಲಿಂಗಾಯತರ ಅಸ್ಮಿತೆ, ವಿಶ್ವದ ತಂದೆ. ಹಂಜ್ ಆಡಿದ ಮಾತುಗಳು ಮತ್ತು ಪುಸ್ತಕದಿಂದ ಬಸವಾಭಿಮಾನಿಗಳಿಗೆ ಆಘಾತವಾಗಿದೆ.
ಇದರಲ್ಲಿ ರಾಜಿ ಸಾಧ್ಯವೇ ಇಲ್ಲ. ನಾನು ಈಗ ಆತ್ಮಚರಿತ್ರೆ ಬರೆಯುತ್ತಿದ್ದೇನೆ. ಇಲ್ಲಿ ಇದುವರೆಗೂ ಗೊತ್ತಿಲ್ಲದ ಅನೇಕ ಸತ್ಯಗಳನ್ನು ನಾನು ದಾಖಲಿಸುತ್ತಿದ್ದೇನೆ' ಎಂದು ಪಾಟೀಲ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R