ನವಜಾತ ಶಿಶುವಿನ ಮೊದಲ 28 ದಿನಗಳು ಅತ್ಯಂತ ನಿರ್ಣಾಯಕ: ಎಸ್.ಡಿ. ಬೆನ್ನೂರ್
ಗದಗ, 19 ನವೆಂಬರ್ (ಹಿ.ಸ.) ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆಯ ಕುರಿತು ತಾಯಂದಿರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉಪ ಜ
ಫೋಟೋ


ಗದಗ, 19 ನವೆಂಬರ್ (ಹಿ.ಸ.)

ನವಜಾತ ಶಿಶುಗಳ ಆರೋಗ್ಯ ಮತ್ತು ಸುರಕ್ಷತೆಯ ಕುರಿತು ತಾಯಂದಿರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಗದಗ ಜಿಲ್ಲೆಯ ಹಿರೇವಡ್ಡಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ್ ಮಾತನಾಡಿ, ಮಗು ಜನಿಸಿದ ಮೊದಲ 28 ದಿನಗಳು ಮಗುವಿನ ಉಳಿವಿನ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಅವಧಿಯಾಗಿದೆ. ಈ ಅವಧಿಯಲ್ಲಿ ತಾಯಂದಿರು ಮಗುವಿನ ಆರೈಕೆಯಲ್ಲಿ ವಿಶೇಷ ಕಾಳಜಿ ಹಾಗೂ ಜಾಗೃತಿ ವಹಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಮಗು ಜನಿಸಿದ ಮೊದಲ ತಿಂಗಳು ಜೀವಮಾನದ ಆರೋಗ್ಯ ಮತ್ತು ಬೆಳವಣಿಗೆಗೆ ಭದ್ರ ಬುನಾದಿಯಾಗಿದೆ. ನವಜಾತ ಶಿಶುವನ್ನು ಬೆಚ್ಚಗಿಡುವುದು, ಶುಚಿತ್ವ ಕಾಪಾಡುವುದು ಹಾಗೂ ದಿನಕ್ಕೆ 8ರಿಂದ 12 ಬಾರಿ ಎದೆಹಾಲುಣಿಸುವುದು ಅಗತ್ಯ. ಎದೆಹಾಲು ಸುಲಭವಾಗಿ ಜೀರ್ಣವಾಗುವುದರಿಂದ ಮಗುವಿಗೆ ಆಗಾಗ ಹಸಿವಾಗುತ್ತದೆ. ಆದ್ದರಿಂದ ತಾಯಂದಿರು ನಿಯಮಿತವಾಗಿ ಮಗುವಿಗೆ ಎದೆಹಾಲುಣಿಸಬೇಕು ಎಂದು ಸಲಹೆ ನೀಡಿದರು.

ನವಜಾತ ಶಿಶುವಿನಲ್ಲಿ ಜ್ವರ, ಫಿಟ್ಸ್, ತೀವ್ರ ಭೇದಿ, ವಾಂತಿ, ಮಲದಲ್ಲಿ ರಕ್ತ, ಚಟುವಟಿಕೆ ಇಲ್ಲದಿರುವುದು, ಕಣ್ಣು ಊದಿಕೊಳ್ಳುವುದು, ಕೈಕಾಲು ಹಾಗೂ ಚರ್ಮ ಹಳದಿಯಾಗುವುದು, ಅಸಹಜ ಅಳು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಎಚ್ಚರಿಸಿದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಸಜ್ಜನರ ಮಾತನಾಡಿ, ನವಜಾತ ಶಿಶುಗಳ ಆರೈಕೆಯಲ್ಲಿ ಕಾಂಗರೂ ಮಾದರಿ ಆರೈಕೆ ಮಹತ್ವದ್ದಾಗಿದೆ. ಮಗುವಿನ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಪ್ರತಿಯೊಂದು ಹಂತದಲ್ಲೂ ಜಾಗೃತಿ ವಹಿಸಬೇಕು. ಅಲ್ಲದೆ, ಮಗುವಿಗೆ ನಿಗದಿತ ಸಮಯದಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ವೈದ್ಯಾಧಿಕಾರಿ ಡಾ. ನಿತೀನ್ ಸ್ವರೂಪ್ ಟಿ.ಎಂ. ಅವರು ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಶುಶ್ರೂಷಣಾಧಿಕಾರಿ ಶ್ವೇತಾ ಕರವೀರಮಠ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜೆ.ಎನ್. ಬೋದ್ಲೆಖಾನ, ಫಾರ್ಮಸಿ ಅಧಿಕಾರಿ ಐಶ್ವರ್ಯ ಸಿ., ಗರ್ಭಿಣಿಯರು ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande