ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವಲ್ಲಿ ಲಿಂಗಾಯತ ಮಠಗಳ ಕೊಡುಗೆ ಅನನ್ಯ: ತೋಂಟದ ಸಿದ್ದರಾಮ ಶ್ರೀಗಳು
ಗದಗ, 19 ನವೆಂಬರ್ (ಹಿ.ಸ.) ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದ್ದು, ಭಾಷೆ ಮತ್ತು ಸಂಸ್ಕೃತಿಯನ್ನು ವೈವಿಧ್ಯಮಯವಾಗಿ ಬೆಳೆಸುವಲ್ಲಿ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ಗದಗ ನಗರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಿದ್ದ 2824
ಫೋಟೋ


ಗದಗ, 19 ನವೆಂಬರ್ (ಹಿ.ಸ.)

ಕನ್ನಡ ಭಾಷೆಗೆ ಸುದೀರ್ಘ ಇತಿಹಾಸವಿದ್ದು, ಭಾಷೆ ಮತ್ತು ಸಂಸ್ಕೃತಿಯನ್ನು ವೈವಿಧ್ಯಮಯವಾಗಿ ಬೆಳೆಸುವಲ್ಲಿ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಗದಗ ನಗರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಆಯೋಜಿಸಿದ್ದ 2824ನೇ ಶಿವಾನುಭವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಬಸವಾದಿ ಶರಣರು ಜೀವನದ ಮೌಲ್ಯಗಳು, ಸಿದ್ಧಾಂತಗಳು ಹಾಗೂ ಸಾಮರಸ್ಯದ ಬದುಕಿನ ವಿಧಾನವನ್ನು ವಚನಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ್ದಾರೆ. ಆಡುಭಾಷೆಯಾದ ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಓಲೆ ಮಠಗಳು ತಾಳೆಗರಿ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂರಕ್ಷಿಸುವ ಮೂಲಕ ಕನ್ನಡ ಭಾಷೆಯ ಉಳಿವಿಗೆ ಶ್ರಮಿಸಿದರೆ, ಸಾಲಿಮಠಗಳು ಕನ್ನಡ ಶಾಲೆಗಳ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಸೇವೆ ಸಲ್ಲಿಸಿವೆ. ಓದಿಸುವ ಮಠಗಳು ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡಿವೆ ಎಂದರು.

ಎಡೆಯೂರು ತೋಂಟದ ಸಿದ್ದಲಿಂಗ ಶಿವಯೋಗಿಗಳು 701 ಶಿಷ್ಯರನ್ನು ಕಟ್ಟಿಕೊಂಡು ವಚನಗಳನ್ನು ರಚಿಸಿ, ನಾಡಿನಾದ್ಯಂತ ಸಂಚರಿಸಿ ವಚನಗಳ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಜನಮಾನಸದಲ್ಲಿ ಬಿತ್ತಿದ್ದಾರೆ. ಸುತ್ತೂರು, ಬಾಲ್ಕಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ ಹಾಗೂ ಗದಗ ಸೇರಿದಂತೆ ಅನೇಕ ಮಠಗಳು ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ಸಂರಕ್ಷಣೆಗೆ ಅನುಪಮ ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಿದರು.

ಗದುಗಿನ ತೋಂಟದಾರ್ಯ ಮಠವು ಪುಸ್ತಕ ಪ್ರಕಟಣೆ, ಕಲಾವಿದರು, ಸಾಹಿತಿಗಳು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ. ಪ್ರಸ್ತುತ ಕನ್ನಡ ಭಾಷೆಯ ರಕ್ಷಣೆಗೆ ಕನ್ನಡಿಗರು ಮುಂದಾಗಬೇಕಾದ ಅನಿವಾರ್ಯತೆ ಇದೆ. ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವ ಭರದಲ್ಲಿ ಕನ್ನಡ ಭಾಷೆಗೆ ಹಿನ್ನಡೆಯಾಗುತ್ತಿದೆ. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವೈದ್ಯಕೀಯ ಕ್ಷೇತ್ರದ ಬೆಳಗಾವಿಯ ಡಾ. ಸುಜಾತಾ ಜಾಲಿ ಹಾಗೂ ರಂಗಕಲಾ ಕ್ಷೇತ್ರದ ಡಾ. ಡಿ.ಎಸ್. ಚೌಗಲೆ ಅವರನ್ನು ಸನ್ಮಾನಿಸಲಾಯಿತು. ಗದಗ ಪರಿಸರದ ಯುವ ಚಿತ್ರಕಲಾವಿದರಾದ ರವಿ ಶಿಶುವಿನಹಳ್ಳಿ ಹಾಗೂ ಫಕ್ಕಿರೇಶ ಕುಳಗೇರಿ ಅವರನ್ನೂ ಗೌರವಿಸಲಾಯಿತು.

ಬೆಳಗಾವಿಯ ಸಾಹಿತಿ ಪ್ರಕಾಶ ಗಿರಿಮಲ್ಲನವರ ಅವರು 'ಕನ್ನಡಕ್ಕೆ ಲಿಂಗಾಯತ ಮಠಗಳ ಕೊಡುಗೆ' ವಿಷಯ ಕುರಿತು ಉಪನ್ಯಾಸ ನೀಡಿ, ಹಸ್ತಪ್ರತಿಗಳು, ವಚನ ಸಾಹಿತ್ಯ ಹಾಗೂ ಮೌಖಿಕ ಕಲಾಪರಂಪರೆಯ ಮೂಲಕ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಲಿಂಗಾಯತ ಮಠಗಳ ಸೇವೆ ಅಪಾರವಾಗಿದೆ. ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಭಾಷೆ ಬೆಳೆದು ಬಂದ ರೀತಿಯನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಲಲಿತಾ ಅರಳಿ ಅವರು ರಚಿಸಿದ 'ಆರಾಧನೆ' ಮತ್ತು 'ಮಿನುಗು ನಕ್ಷತ್ರಗಳು' ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕಗಳ ಕುರಿತು ವಿ.ಟಿ. ಮಾಗಳದ ಮಾತನಾಡಿದರು. ಸಾನ್ವಿ ರಾಜಪ್ಪನವರ ಗ್ರಂಥಪಠಣ ಹಾಗೂ ಪ್ರತಿಕ್ಷ ತುಕ್ಕಣ್ಣವರ ವಚನಚಿಂತನ ನಡೆಸಿದರು. ಸಂಡೂರಿನ ಕೆ.ಎಸ್. ನಾಗರಾಜ ಮತ್ತು ರಾಣೇಬೆನ್ನೂರಿನ ಲಲಿತಾ ಅರಳಿ ದಾಸೋಹ ಸೇವೆ ಸಲ್ಲಿಸಿದರು. ಮೃತ್ಯುಂಜಯ ಹಾಗೂ ಹೇಮಂತಕುಮಾರ ಅವರಿಂದ ವಚನಸಂಗೀತ ಕಾರ್ಯಕ್ರಮ ಜರುಗಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲನಗೌಡ ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಸಿದ್ದಣ್ಣ ಬಂಗಾರಶೆಟ್ಟರ, ದಾನಯ್ಯ ಗಣಾಚಾರಿ, ಜಿ.ಬಿ. ಪಾಟೀಲ, ಗಂಗಾಧರ ಹಿರೇಮಠ, ಕೆ.ಎ. ಬಳಿಗಾರ, ಪ್ರತಿಭಾ ಬಡ್ನಿ, ಸುನಂದಾ ಪಿಳ್ಳಿ, ಸೋಮು ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande