ಹಸು ಮೇಯಿಸಲು ತೆರಳಿದ್ದ ವ್ಯಕ್ತಿ ಮೇಲೆ ಕಾಡುಕೋಣ ದಾಳಿ; 60 ವರ್ಷದ ಸಿದ್ದೇಗೌಡ ಸಾವು
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮರಿಜೋಗಿದೊಡ್ಡಿ ಸಮೀಪ ಹಸು ಮೇಯಿಸಲು ತೆರಳಿದ್ದ 60 ವರ್ಷದ ಸಿದ್ದೇಗೌಡ ಅವರ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Mandya-Malavalli-Wild-Bison-Attack-Kills-60-Year-Old-Man


ಮಂಡ್ಯ, 19 ನವೆಂಬರ್ (ಹಿ.ಸ.):

ಹಸುಗಳನ್ನು ಮೇಯಿಸಲು ಅರಣ್ಯ ಪ್ರದೇಶದ ಬಳಿ ತೆರಳಿದ್ದ ವ್ಯಕ್ತಿಯ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮರಿಜೋಗಿದೊಡ್ಡಿ ಗ್ರಾಮದ ಸಮೀಪ ನಡೆದಿದೆ.

ಮಳವಳ್ಳಿ ತಾಲೂಕಿನ ಮಾಸ್ಟರ್ ದೊಡ್ಡಿ ಗ್ರಾಮದ ಸಿದ್ದೇಗೌಡ (60) ಕಾಡುಕೋಣ ದಾಳಿಗೆ ಬಲಿಯಾದ ದುರ್ದೈವಿ. ಎಂದಿನಂತೆ ಸಿದ್ದೇಗೌಡ ಅವರು ಹಸುಗಳನ್ನು ಮೇಯಿಸಲು ಮರಿಜೋಗಿದೊಡ್ಡಿ ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶದ ಸಮೀಪ ತೆರಳಿದ್ದರು.

ಈ ವೇಳೆ ಏಕಾಏಕಿ ಎದುರಾದ ಕಾಡುಕೋಣ ಅವರ ಮೇಲೆ ದಾಳಿ ನಡೆಸಿ ತಿವಿದಿದೆ. ಕಾಡುಕೋಣದ ತೀವ್ರ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸಿದ್ದೇಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮೃತದೇಹವನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಲು ಆಗ್ರಹ

ಮರಿಜೋಗಿದೊಡ್ಡಿ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಜಾನುವಾರುಗಳನ್ನು ಮೇಯಿಸಲು ತೆರಳುವ ರೈತರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುತ್ತಿದೆ.

ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಾಡುಪ್ರಾಣಿಗಳ ಚಲನವಲನದ ಮೇಲೆ ನಿಗಾ ಇರಿಸಬೇಕು. ಜನರು ಮತ್ತು ಜಾನುವಾರುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande