


ಬಳ್ಳಾರಿ, 18 ನವೆಂಬರ್ (ಹಿ.ಸ.)
`ಕರುನಾಡ ಮಣ್ಣೆಂದರೆ ಬೆಣ್ಣೆಯಂಥಹಾ ಗುಣ; ಕನ್ನಡ ಭಾಷೆ ಎಂದರೆ ಅಸ್ಮಿತೆಯ ಮನ. ತಾಯಿಯಂಥಹ ಅಂತಃಕರಣದಿಂದ ಲಾಲಿಸಿ, ಪಾಲಿಸಿ, ಮಡಿಲೊಳಗಾಡಿಸುವ ಪುಣ್ಯ ನಮ್ಮದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕøತರಾದ ಡಾ. ಶಿವಲಿಂಗಪ್ಪ ಹಂದಿಹಾಳು ಅವರು ತಿಳಿಸಿದ್ದಾರೆ.
ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ಕನ್ನಡ ಭಾಷಾ ವಿಭಾಗ ಬುಧವಾರ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಂದಾಲ್ ಆದರ್ಶ ವಿದ್ಯಾಲಯದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಈ ಶಾಲೆಯಲ್ಲಿ ಸಮಗ್ರ ಭಾರತದ ಅನುಭವವಾಗಿದೆ. ವಿವಿಧ ಭಾಷೆ, ಸಂಸ್ಕೃತಿ ಮತ್ತು ಪ್ರದೇಶಗಳಿಂದ ಬಂದ ವಿದ್ಯಾರ್ಥಿಗಳು ಒಂದೇ ವಿದ್ಯಾಸಂಸ್ಥೆಯಲ್ಲಿ ಸ್ನೇಹಪರತೆಯಿಂದ ಅಕ್ಷರ ಕಲಿಯುತ್ತಿರುವುದು ಶ್ಲಾಘನೀಯ ಎಂದರು.
ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಈಶ್ವರಿಶರ್ಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಶ್ರೀಮಂತಿಕೆ, ಕನ್ನಡಿಗರ ಹೃದಯವಂತಿಕೆ, ಆತಿಥ್ಯ ಮತ್ತು ಮಾನವೀಯ ಮೌಲ್ಯಗಳು ದೊಡ್ಡವು. ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಂಡು, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸಬೇಕು ಎಂದರು.
ಸಿಬಿಎಸ್ಇ ಕನ್ನಡ ಭಾಷೆಯ ಪ್ರಶ್ನೆಪತ್ರಿಕೆ ಮಂಡಳಿಯ ಸದಸ್ಯರಾಗಿರುವ ಬಸರಕೋಡು ನಾಗರಾಜ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್