
ಶಿವಮೊಗ್ಗ, 18 ನವೆಂಬರ್ (ಹಿ.ಸ.):
ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗಳಿಗೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಚಿವರು ತಿಳುವಳಿಕೆಯಿಲ್ಲದೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಹಿಂದೆ ಬಂಗಾರಪ್ಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದರು.
“ನಾನು ಯಾವತ್ತೂ ಬಂಗಾರಪ್ಪ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದವನಲ್ಲ. ಅವರ ಮನೆಯಲ್ಲಿ ಸಂಬಳ ಪಡೆದು ಕೆಲಸ ಮಾಡಿದವನೂ ಅಲ್ಲ. 1987ರಲ್ಲಿ ಬಂಗಾರಪ್ಪ ಅವರ ಬಳಿ ಮಾರುತಿ ಕಾರು ಇತ್ತು. ಅದೇ ಸಂದರ್ಭದಲ್ಲಿ ನನ್ನ ಬಳಿಯೂ ಬಿಳಿ ಬಣ್ಣದ ಮಾರುತಿ ಕಾರು ಇತ್ತು. ಆದರೆ ಈ ವಿಚಾರ ಮಧು ಬಂಗಾರಪ್ಪ ಅವರಿಗೆ ಗೊತ್ತಿಲ್ಲ. ಏಕೆಂದರೆ ಆಗ ಅವರು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರು ಕೆಲಸಗಾರರು, ಯಾರು ಅಡುಗೆ ಮಾಡುವವರು ಎಂಬುದೂ ಅವರಿಗೆ ತಿಳಿದಿರಲಿಲ್ಲ” ಎಂದು ಹೇಳಿದರು.
ಮಧು ಬಂಗಾರಪ್ಪ ಅವರು ಅವಿವೇಕತನದಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಹಾಲಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳ ವಿರುದ್ಧ ಸಚಿವರು ಬಳಸಿರುವ ಪದಗಳಿಗೂ ಆಕ್ಷೇಪ ವ್ಯಕ್ತಪಡಿಸಿದರು.
“ಯಡಿಯೂರಪ್ಪ ಅವರ ಮಕ್ಕಳಿಗೆ ಬೊಗಳಿ ಎನ್ನುತ್ತಾರೆ. ಬೊಗಳುವುದು ನಾಯಿಯ ಕೆಲಸ. ಯಾರು ಬೊಗಳಿ ಎನ್ನುತ್ತಾರೋ ಅವರೇ ಆ ಕೆಲಸ ಮಾಡುತ್ತಿದ್ದಾರೆ. ಮತ್ತೆ ಒದರೋದು ಎನ್ನುತ್ತಾರೆ. ಒದರೋದು ಕತ್ತೆ. ಶಿಕ್ಷಣ ಸಚಿವರ ಬಾಯಲ್ಲಿ ಇಂತಹ ಮಾತುಗಳು ಬರಬೇಕಾ?” ಎಂದು ಪ್ರಶ್ನಿಸಿದರು.
“ಬಂಗಾರಪ್ಪ ಅವರನ್ನು ಎಲ್ಲಿ ಇಡಬೇಕೋ ಅಲ್ಲಿ ಇಟ್ಟಿದ್ದೇವೆ. ಮಧು ಬಂಗಾರಪ್ಪ ಅವರು ತಮ್ಮ ತಂದೆಯ ಹೆಸರಿನಲ್ಲಿ ಸಚಿವರಾಗಿದ್ದಾರೆ. ಅವರು ಐದು ಬಾರಿ ಚುನಾವಣೆಯಲ್ಲಿ ಸೋತು, ಎರಡು ಬಾರಿ ಗೆದ್ದಿದ್ದಾರೆ. ಬಂಗಾರಪ್ಪ ಅವರಿಗೆ ಅತಿ ಹೆಚ್ಚು ನೋವು ಕೊಟ್ಟಿದ್ದೇ ಮಧು ಬಂಗಾರಪ್ಪ” ಎಂದು ಟೀಕಿಸಿದರು.
ಯಡಿಯೂರಪ್ಪ ಅವರ ಮಕ್ಕಳ ಪರವಾಗಿ ಮಾತನಾಡಿದ ಹಾಲಪ್ಪ, ಅವರಿಗೆ ಕುಟುಂಬದ ಸಂಸ್ಕಾರವಿದೆ. ಆದರೆ ಮಧು ಬಂಗಾರಪ್ಪ ಅವರ ಮಾತು ಮತ್ತು ವರ್ತನೆ ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R