ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ: ಸಂತೋಷ ಕುರಣಿ
ವಿಜಯಪುರ, 18 ನವೆಂಬರ್ (ಹಿ.ಸ.) ಕ್ರೀಡೆಯಲ್ಲಿ ಸಿಗುವ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಸೈಕಲ್ ಕ್ರೀಡಾಪಟು, ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ 10 ಬಾರಿ ಚಿ
ಸೈಕ್ಲಿಂಗ್ ಸ್ಪರ್ಧೆ


ವಿಜಯಪುರ, 18 ನವೆಂಬರ್ (ಹಿ.ಸ.)

ಕ್ರೀಡೆಯಲ್ಲಿ ಸಿಗುವ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ರಾಷ್ಟ್ರೀಯ ಸೈಕಲ್ ಕ್ರೀಡಾಪಟು, ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ 10 ಬಾರಿ ಚಿನ್ನದ ಪದಕ ವಿಜೇತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ಸಂತೋಷ ಕುರಣಿ ಹೇಳಿದರು.

ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಬಿ.ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ಆರಂಭಗೊಂಡ 4ನೇ ಅಥ್ಲಾನ್-2026 ಅಂತರಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೋಲು ನಮ್ಮನ್ನು ಕುಗ್ಗಿಸುತ್ತದೆ ಎಂದು ಭಾವಿಸಬಾರದು. ಬದಲಾಗಿ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಸ್ಪರ್ಧೆಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಸೋಲು ಪ್ರೇರಣೆಯಾಗಬೇಕು. ಕ್ರೀಡೆಯಲ್ಲಿ ಕೇವಲ ಗೆಲುವೊಂದೇ ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ, ಶಿಸ್ತು, ಪರಿಶ್ರಮ, ಸಮಯಪ್ರಜ್ಞೆ ಹಾಗೂ ಕ್ರೀಡಾ ಮನೋಭಾವಕ್ಕೂ ಹೆಚ್ಚಿನ ಮಹತ್ವವಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕ್ರೀಡೆಗಳು ಕೇವಲ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಚಟುವಟಿಕೆಗಳಲ್ಲ. ಅವು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ, ತಾಳ್ಮೆ, ಆತ್ಮವಿಶ್ವಾಸ ಹಾಗೂ ಗುರಿ ಸಾಧಿಸುವ ಛಲವನ್ನು ಬೆಳೆಸುತ್ತವೆ. ಅಂತರಶಾಲಾ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ ಎಂದರು.

ಕ್ರೀಡೆಗಳಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ

ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್ (CBSE) ಹಿರಿಯ ಸಂಯೋಜಕಿ ದೀಪಾ ಜಂಬುರೆ ಮಾತನಾಡಿ, ಶಾಲೆಗಳಲ್ಲಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಹೆಚ್ಚಿನ ಸಹಕಾರಿಯಾಗುತ್ತದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಸಹಕಾರ, ಪರಸ್ಪರ ಗೌರವ, ನಾಯಕತ್ವ ಗುಣ ಹಾಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸುತ್ತವೆ ಎಂದು ಹೇಳಿದರು.

ವಿವಿಧ ಶಾಲೆಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ಸ್ಪರ್ಧಿಸುವುದರಿಂದ ಪರಸ್ಪರ ಸ್ನೇಹ, ಸೌಹಾರ್ದತೆ ಮತ್ತು ಸಹಬಾಳ್ವೆಯ ಭಾವನೆ ಬೆಳೆಯುತ್ತದೆ. ವಿದ್ಯಾರ್ಥಿಗಳಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ಕ್ರೀಡಾಕೂಟಗಳು ಮಹತ್ವದ ಅವಕಾಶ ಕಲ್ಪಿಸುತ್ತವೆ ಎಂದು ತಿಳಿಸಿದರು.

11 ಶಾಲೆಗಳ 31 ತಂಡಗಳು ಭಾಗಿ

ಮೂರು ದಿನಗಳ ಕಾಲ ನಡೆಯಲಿರುವ 4ನೇ ಅಥ್ಲಾನ್-2026 ಅಂತರಶಾಲಾ ಕ್ರೀಡಾಕೂಟದಲ್ಲಿ ಸಿಬಿಎಸ್ಇ ಮತ್ತು ಐಸಿಎಸ್ಇ ಪಠ್ಯಕ್ರಮದ ವಿವಿಧ ಶಾಲೆಗಳ ಒಟ್ಟು 11 ಶಾಲೆಗಳ 31 ತಂಡಗಳು ಭಾಗವಹಿಸಿವೆ. ಫುಟ್ಬಾಲ್, ಥ್ರೋಬಾಲ್, ಬಾಸ್ಕೆಟ್ಬಾಲ್ ಹಾಗೂ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಕೌಶಲ್ಯ ಪ್ರದರ್ಶಿಸಲಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಸುವುದು ಈ ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವುದರ ಜತೆಗೆ ಸ್ನೇಹ ಮತ್ತು ಏಕತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯ ದೈಹಿಕ ನಿರ್ದೇಶಕ ಎಸ್.ಎಸ್. ಕೋರಿ, ಶಾಲೆಯ ದೈಹಿಕ ವಿಭಾಗದ ಮುಖ್ಯಸ್ಥ ಸ್ಯಾಮಸನ್ ಸೌಜಾ, ದೈಹಿಕ ಶಿಕ್ಷಕರಾದ ಸುನಿತಾ ಪತ್ತಾರ, ಸಂಗಮ ಅಲಮೇಲ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ವಿಕ್ರಮ ನಾರ್ವೇಕರ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

ವಿದ್ಯಾರ್ಥಿನಿ ಆರ್ಯಾ ತೋಸ್ನಿವಾಲ ಸ್ವಾಗತಿಸಿದರು. ರಿಯಾ ಕಟ್ಟಿ ಮತ್ತು ಮಿಸ್ಟಿ ನುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ನಾಯಕಿ ಛವಿ ರುಣವಾಲ ವಂದಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande