ಸಿಂಗಪುರದಲ್ಲಿ ಸಚಿವ ಪ್ರಲ್ಹಾದ ಜೋಶಿಗೆ ಕನ್ನಡಿಗರಿಂದ ಹೃದಯಸ್ಪರ್ಶಿ ಸನ್ಮಾನ
ಸಿಂಗಾಪುರ್, 16 ನವೆಂಬರ್ (ಹಿ.ಸ.): ಧಾರವಾಡದ ಮಿಶ್ರಪೇಡಾ, ಮಾವಿನ ಹಣ್ಣು ಹಾಗೂ ಶಿಗ್ಗಾಂವಿ ಭಾಗದ ಸಾಂಪ್ರದಾಯಿಕ ಸಿಹಿ ತಿನಿಸುಗಳಿಗೆ ಸಿಂಗಪುರದಲ್ಲಿ ಮಾರುಕಟ್ಟೆ ವಿಸ್ತರಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅನಿವಾಸಿ ಭಾರತೀಯರಿಗೆ ಕರೆ ನೀಡಿದ್ದಾರೆ. ಸೋಮವಾರ ಸಿಂಗ
ಸಿಂಗಾಪುರದಲ್ಲಿ ಕನ್ನಡಿಗರ ಜೊತೆ ಸಚಿವ ಪ್ರಹ್ಲಾದ ಜೋಶಿ


ಸಿಂಗಾಪುರ್, 16 ನವೆಂಬರ್ (ಹಿ.ಸ.):

ಧಾರವಾಡದ ಮಿಶ್ರಪೇಡಾ, ಮಾವಿನ ಹಣ್ಣು ಹಾಗೂ ಶಿಗ್ಗಾಂವಿ ಭಾಗದ ಸಾಂಪ್ರದಾಯಿಕ ಸಿಹಿ ತಿನಿಸುಗಳಿಗೆ ಸಿಂಗಪುರದಲ್ಲಿ ಮಾರುಕಟ್ಟೆ ವಿಸ್ತರಿಸುವಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅನಿವಾಸಿ ಭಾರತೀಯರಿಗೆ ಕರೆ ನೀಡಿದ್ದಾರೆ.

ಸೋಮವಾರ ಸಿಂಗಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಕನ್ನಡ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಸಚಿವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕನ್ನಡಿಗರೊಂದಿಗೆ ಸಂವಾದ ನಡೆಸಿದ ಸಚಿವರು, ಕರ್ನಾಟಕದ ಸ್ಥಳೀಯ ಆಹಾರ ಉತ್ಪನ್ನಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸುವ ಕುರಿತು ಚರ್ಚಿಸಿದರು.

ತಾಯ್ನಾಡಿನಿಂದ ದೂರವಿದ್ದರೂ ಸಿಂಗಪುರದಲ್ಲಿ ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಪ್ರೀತಿ ಹಾಗೂ ಅಭಿಮಾನದಿಂದ ಪೋಷಿಸುತ್ತಿರುವ ಕನ್ನಡಿಗರ ಕಾರ್ಯ ಶ್ಲಾಘನೀಯ. ವಿದೇಶದಲ್ಲಿದ್ದರೂ ಕನ್ನಡದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಮಾಡಿದ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

**ಸಿಂಗಪುರಕ್ಕೆ ಉತ್ತರ ಕರ್ನಾಟಕದ ಸವಿರುಚಿ ಪರಿಚಯಿಸಿದ ಮಂಜುನಾಥ್‌ಗೆ ಪ್ರೋತ್ಸಾಹ**

ಸಿಂಗಪುರದಲ್ಲಿ 'ಬಾಕ್ಸ್ ಮಾಮಾ' ಸಂಸ್ಥೆಯನ್ನು ಸ್ಥಾಪಿಸಿ ಧಾರವಾಡದ ಮಿಶ್ರಪೇಡಾ ಹಾಗೂ ಮಾವಿನ ಹಣ್ಣಿನ ಸವಿಯನ್ನು ಅಲ್ಲಿನ ಜನರಿಗೆ ಪರಿಚಯಿಸಿರುವ ಹುಬ್ಬಳ್ಳಿ-ಧಾರವಾಡ ಮೂಲದ ಪಿ. ಮಂಜುನಾಥ್ ಅವರೊಂದಿಗೆ ಸಚಿವರು ಸಂವಾದ ನಡೆಸಿದರು.

ಮಂಜುನಾಥ್ ಅವರು ಕಳೆದ ವರ್ಷ ಸಿಂಗಪುರದಲ್ಲಿ ಸುಮಾರು 10 ಟನ್ ಧಾರವಾಡದ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ, 100 ಕೆಜಿಗೂ ಹೆಚ್ಚು ಧಾರವಾಡ ಮಿಶ್ರಪೇಡಾ ಹಾಗೂ ಶಿಗ್ಗಾಂವಿಯ ಸಾಂಪ್ರದಾಯಿಕ ತಿಂಡಿ-ತಿನಿಸುಗಳನ್ನು ಸಿಂಗಪುರದ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಮಂಜುನಾಥ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಪ್ರಲ್ಹಾದ ಜೋಶಿ, ಧಾರವಾಡದ ಮಾವು, ಮಿಶ್ರಪೇಡಾ ಸೇರಿದಂತೆ ಉತ್ತರ ಕರ್ನಾಟಕದ ಆಹಾರ ಉತ್ಪನ್ನಗಳಿಗೆ ಸಿಂಗಪುರದಲ್ಲಿ ಇನ್ನಷ್ಟು ಮಾರುಕಟ್ಟೆ ವಿಸ್ತರಿಸುವಂತೆ ಪ್ರೋತ್ಸಾಹಿಸಿದರು.

**ಕರ್ನಾಟಕದಲ್ಲೇ ಗುಣಮಟ್ಟದ ಪ್ಯಾಕಿಂಗ್‌ಗೆ ಸಲಹೆ**

ಉತ್ತರ ಕರ್ನಾಟಕದ ಆಹಾರ ಉತ್ಪನ್ನಗಳಿಗೆ ಸಿಂಗಪುರದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಲು ಕರ್ನಾಟಕದಲ್ಲಿಯೇ ಗುಣಮಟ್ಟದ ಪ್ಯಾಕಿಂಗ್ ವ್ಯವಸ್ಥೆ ರೂಪಿಸುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು.

ಇದರಿಂದ ಹುಬ್ಬಳ್ಳಿ, ಧಾರವಾಡ ಮತ್ತು ಶಿಗ್ಗಾಂವಿ ಭಾಗದ ಸ್ಥಳೀಯ ಪ್ಯಾಕೇಜಿಂಗ್ ಉದ್ಯಮಗಳಿಗೂ ಉತ್ತೇಜನ ದೊರೆಯಲಿದೆ. ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿವೆ ಎಂದು ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande