ಸಾಮಾಜಿಕ ಮಾಧ್ಯಮದ ಹೊಣೆಗಾರಿಕೆಗಾಗಿ ಪರಿಣಾಮಕಾರಿ ವ್ಯವಸ್ಥೆ ರೂಪಿಸಲು ಸಮಾಜದಲ್ಲಿ ಚರ್ಚೆಯಾಗಲಿ: ಅಶ್ವಿನಿ ವೈಷ್ಣವ್
ನವದೆಹಲಿ, 16 ನವೆಂಬರ್ (ಹಿ.ಸ.): ಸಾಮಾಜಿಕ ಮಾಧ್ಯಮದ ವಿಷಯಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸುವುದು ಹಾಗೂ ಸಾರ್ವಜನಿಕರ ದೂರುಗಳ ಪರಿಹಾರಕ್ಕೆ ಪರಿಣಾಮಕಾರಿ ವ್ಯವಸ್ಥೆ ರೂಪಿಸುವ ಕುರಿತು ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ನಿರ್ವಾಹಕರು ಗಂಭೀರ ಚಿಂತನ
प्रेस


ನವದೆಹಲಿ, 16 ನವೆಂಬರ್ (ಹಿ.ಸ.):

ಸಾಮಾಜಿಕ ಮಾಧ್ಯಮದ ವಿಷಯಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸುವುದು ಹಾಗೂ ಸಾರ್ವಜನಿಕರ ದೂರುಗಳ ಪರಿಹಾರಕ್ಕೆ ಪರಿಣಾಮಕಾರಿ ವ್ಯವಸ್ಥೆ ರೂಪಿಸುವ ಕುರಿತು ನಾಗರಿಕ ಸಮಾಜ, ಬುದ್ಧಿಜೀವಿಗಳು ಮತ್ತು ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳ ನಿರ್ವಾಹಕರು ಗಂಭೀರ ಚಿಂತನೆ ನಡೆಸಬೇಕು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಕರೆ ನೀಡಿದ್ದಾರೆ.

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ಭಾರತೀಯ ಪತ್ರಿಕಾ ಮಂಡಳಿ ನವದೆಹಲಿಯ ಆಕಾಶವಾಣಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮ ಸಮಾಜವನ್ನು ಬಲಪಡಿಸುವ ಸಾಧನವಾಗಬೇಕೇ ಹೊರತು ಸಮಾಜವನ್ನು ದುರ್ಬಲಗೊಳಿಸುವ ಮತ್ತು ವಿಭಜಿಸುವ ವೇದಿಕೆಯಾಗಬಾರದು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಇಂದು ಯಾರಿಗೂ ಸ್ಪಷ್ಟ ಹೊಣೆಗಾರಿಕೆ ಇಲ್ಲದ ಪರಿಸ್ಥಿತಿ ಇದೆ. ವೇದಿಕೆಗಳು ತಮ್ಮದೇ ಸಮುದಾಯ ಮಾರ್ಗಸೂಚಿ ಮತ್ತು ನೀತಿಗಳ ಆಧಾರದಲ್ಲಿ ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತಿವೆ. ಆದರೆ ಈ ವ್ಯವಸ್ಥೆ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ನಾಗರಿಕರ ಧ್ವನಿಗೆ ಅವಕಾಶ ಕಲ್ಪಿಸುವುದು, ಅವರ ದೂರುಗಳನ್ನು ಪರಿಹರಿಸುವುದು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವುದು ಕೇವಲ ಸ್ವಯಂ ನಿಯಂತ್ರಣದಿಂದ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

'ಪತ್ರಿಕೋದ್ಯಮ: ಸಂಚಲನವೇ ಅಥವಾ ಜವಾಬ್ದಾರಿಯೇ' ಎಂಬ ವಿಷಯದ ಕುರಿತು ಮಾತನಾಡಿದ ಅವರು, ಮಾಧ್ಯಮಗಳ ಬದಲಾಗುತ್ತಿರುವ ಪಾತ್ರ, ತಂತ್ರಜ್ಞಾನದ ಬೆಳವಣಿಗೆ, ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ಪತ್ರಿಕೋದ್ಯಮದ ಜವಾಬ್ದಾರಿಗಳ ಕುರಿತು ವಿವರಿಸಿದರು. ಕಳೆದ ಎರಡು ದಶಕಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಬದಲಾವಣೆಗಳು ಸಂಭವಿಸಲಿವೆ ಎಂದು ಎಚ್ಚರಿಸಿದರು.

ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸುಳ್ಳು ಜಾಹೀರಾತುಗಳು, ಕೃತಕ ತಂತ್ರಜ್ಞಾನ ಬಳಸಿ ಸೃಷ್ಟಿಸಲಾಗುವ ನಕಲಿ ವಿಷಯಗಳು ಹಾಗೂ ಮ್ಯೂಚುವಲ್ ಫಂಡ್‌ನಂತಹ ಹಣಕಾಸು ವಿಚಾರಗಳ ಕುರಿತು ಜನರನ್ನು ದಾರಿ ತಪ್ಪಿಸುವ ಪ್ರಚಾರ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಹಲವು ಉದಾಹರಣೆಗಳನ್ನು ಹಣಕಾಸು ಸಚಿವಾಲಯವೂ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದರು.

ತಮ್ಮ ವೇದಿಕೆಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕು. ಕೇವಲ ಸಮುದಾಯ ಮಾರ್ಗಸೂಚಿಗಳನ್ನು ರೂಪಿಸಿದರೆ ಜವಾಬ್ದಾರಿ ಮುಗಿಯುವುದಿಲ್ಲ. ಆ ನಿಯಮಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಡಿಜಿಟಲ್ ಬಂಧನ ಮತ್ತು ಸೈಬರ್ ವಂಚನೆ ಪ್ರಕರಣಗಳನ್ನು ಉಲ್ಲೇಖಿಸಿದ ಅವರು, ವಿಶೇಷವಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಅವರ ಬ್ಯಾಂಕ್ ಖಾತೆಗಳಿಂದ ಹಣ ದೋಚಲಾಗುತ್ತಿದೆ. ಇಂತಹ ವಂಚನೆಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಹೊಣೆಗಾರಿಕೆ ಇರಬೇಕು. ತಮ್ಮ ವೇದಿಕೆಗಳಲ್ಲಿ ಯಾವ ರೀತಿಯ ವಿಷಯಗಳು ಹರಿದಾಡುತ್ತಿವೆ ಮತ್ತು ಅವುಗಳನ್ನು ಜನರನ್ನು ವಂಚಿಸಲು ಬಳಸಲಾಗುತ್ತಿದೆಯೇ ಎಂಬುದರ ಬಗ್ಗೆ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾಗರಿಕರನ್ನು ಸಬಲೀಕರಣಗೊಳಿಸುವುದು, ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವುದು ಮತ್ತು ದೂರುಗಳ ಪರಿಹಾರಕ್ಕೆ ಪರಿಣಾಮಕಾರಿ ವೇದಿಕೆ ಒದಗಿಸುವುದು ಅಗತ್ಯವಾಗಿದೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಎರಡೂ ಸಮಾಜವನ್ನು ಬಲಪಡಿಸುವಂತಹ ವ್ಯವಸ್ಥೆ ರೂಪಿಸಬೇಕು. ಇದಕ್ಕಾಗಿ ಎಲ್ಲ ಪಾಲುದಾರರು ಒಟ್ಟಾಗಿ ಚರ್ಚಿಸಿ ಸಾಮಾನ್ಯ ದೃಷ್ಟಿಕೋನ ಹಾಗೂ ಒಮ್ಮತಕ್ಕೆ ಬರಬೇಕು ಎಂದು ತಿಳಿಸಿದರು.

ಮಾಧ್ಯಮದ ಉದ್ದೇಶ ಕೇವಲ ಮಾಹಿತಿ ತಲುಪಿಸುವುದಲ್ಲ. ಜನರಿಗೆ ಧ್ವನಿಯಾಗುವುದು ಮತ್ತು ಅವರ ಸಮಸ್ಯೆಗಳ ಪರಿಹಾರದಲ್ಲಿ ಪರಿಣಾಮಕಾರಿ ಪಾತ್ರ ವಹಿಸುವುದೂ ಅದರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಯುವ ಪತ್ರಕರ್ತರು ಮತ್ತು ಮಾಧ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಸಚಿವರು, ಕಳೆದ 20 ವರ್ಷಗಳಲ್ಲಿ ತಂತ್ರಜ್ಞಾನ, ಅಂತರ್ಜಾಲ ಮತ್ತು ಸಾಮಾಜಿಕ ಬದಲಾವಣೆಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ವ್ಯಾಪಕ ಪರಿವರ್ತನೆಯಾಗಿದೆ. ಆದರೆ ಮುಂದಿನ ಐದು ವರ್ಷಗಳಲ್ಲಿ ಕಳೆದ 20 ವರ್ಷಗಳಿಗಿಂತಲೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದ್ದೇವೆ ಎಂದರು.

ಈ ಬದಲಾವಣೆಗಳು ಯುವ ಪತ್ರಕರ್ತರಿಗೆ ಸವಾಲುಗಳ ಜತೆಗೆ ಹೊಸ ಅವಕಾಶಗಳನ್ನೂ ಒದಗಿಸಲಿವೆ. ಬದಲಾವಣೆಯನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ತಮ್ಮನ್ನು ತಾವು ರೂಪಿಸಿಕೊಳ್ಳುವವರೇ ಭವಿಷ್ಯದಲ್ಲಿ ಮಾಧ್ಯಮ ಕ್ಷೇತ್ರದ ನಾಯಕರಾಗಲಿದ್ದಾರೆ. ನಿರಂತರ ಕಲಿಕೆ, ಆತ್ಮಾವಲೋಕನ ಮತ್ತು ಹೊಸ ತಂತ್ರಜ್ಞಾನವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಯುವ ಪತ್ರಕರ್ತರಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನದ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತದ ಸ್ಥಾನ 137ನೇ ಸ್ಥಾನದಲ್ಲಿದ್ದಾಗ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿ ಅಫ್ಘಾನಿಸ್ತಾನದಂತಹ ದೇಶಗಳಿದ್ದವು. ಆಗ ಸಂಬಂಧಪಟ್ಟ ಸಂಸ್ಥೆಗೆ ತನ್ನ ಶ್ರೇಯಾಂಕದ ಪಾರದರ್ಶಕ ವ್ಯವಸ್ಥೆ ಮತ್ತು ಮೌಲ್ಯಮಾಪನ ವಿಧಾನವನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದ್ದೆವು. ಆದರೆ ಅದಕ್ಕೆ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಹಿರಿಯ ಪತ್ರಕರ್ತ ರಜತ್ ಶರ್ಮಾ, ಡಿಜಿಟಲ್ ಮಾಧ್ಯಮದ ಸವಾಲುಗಳು ಮತ್ತು ಅದನ್ನು ಜವಾಬ್ದಾರಿಯುತಗೊಳಿಸುವ ಅಗತ್ಯವನ್ನು ಒತ್ತಿಹೇಳಿದರು.

ಕಳೆದ 10ರಿಂದ 12 ವರ್ಷಗಳಲ್ಲಿ ರಾಜಕೀಯದ ಕಾರ್ಯವೈಖರಿ ಬದಲಾಗಿದೆ. ಹಿಂದೆ ನಡೆಯುತ್ತಿದ್ದಂತೆ ಸುದ್ದಿಗಳನ್ನು ವ್ಯವಸ್ಥಿತವಾಗಿ ಸೃಷ್ಟಿಸುವುದು, ಪರಸ್ಪರರ ನಡುವಿನ ಜಗಳಗಳಿಗೆ ಸಂಬಂಧಿಸಿದ ಸುದ್ದಿಗಳು ಈಗ ಹಿಂದಿನ ರೀತಿಯಲ್ಲಿ ಕಂಡುಬರುತ್ತಿಲ್ಲ. ಸರ್ಕಾರದ ಕಾರ್ಯವೈಖರಿಯೂ ಬದಲಾಗಿರುವುದರಿಂದ ಮಾಧ್ಯಮಗಳು ತಮ್ಮ ಕೆಲಸದ ವಿಧಾನವನ್ನೂ ಬದಲಿಸಿಕೊಳ್ಳಬೇಕು ಎಂದು ಹೇಳಿದರು.

ಸಾಮಾಜಿಕ ಮಾಧ್ಯಮಕ್ಕೆ ಯಾವುದೇ ಸಂಪಾದಕರಿಲ್ಲ. ಹೀಗಾಗಿ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸುವುದಕ್ಕಿಂತ ಜವಾಬ್ದಾರಿಯುತ ಸುದ್ದಿಗಳಿಗೆ ಆದ್ಯತೆ ನೀಡಬೇಕು. ಸಮಾಜ ಮತ್ತು ದೇಶವನ್ನು ಮುನ್ನಡೆಸಲು ಗದ್ದಲ ಕಡಿಮೆ ಮಾಡಿ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಚಲನಕ್ಕಿಂತ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಒತ್ತು ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಹಾಗೂ ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯ ಸುಧಾಂಶು ತ್ರಿವೇದಿ ಮಾತನಾಡಿ, ಮಾಧ್ಯಮಗಳಲ್ಲಿ ವಿಷಯಗಳ ನಿರೂಪಣೆ ಮತ್ತು ವಾಸ್ತವಾಂಶಗಳ ನಿಖರತೆಯ ಮಹತ್ವವನ್ನು ಪ್ರಸ್ತಾಪಿಸಿದರು. ಯಾವುದೇ ವಿಷಯವನ್ನು ಹೇಗೆ ಮಂಡಿಸಲಾಗುತ್ತದೆ ಎಂಬುದೂ ಮುಖ್ಯ. ಸೂಕ್ತ ರೀತಿಯಲ್ಲಿ ವಿಚಾರಗಳನ್ನು ಮಂಡಿಸುವ ಕೌಶಲ ಇದ್ದರೆ ಎಲ್ಲ ಮಾತುಗಳಿಗೂ ಜನರು ಕಿವಿಗೊಡುತ್ತಾರೆ ಎಂದು ಹೇಳಿದರು.

ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆ ರಂಜನಾ ಪ್ರಕಾಶ್ ದೇಸಾಯಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್, ಕೇಂದ್ರ ಸರ್ಕಾರದ ಪತ್ರಿಕಾ ಮಾಹಿತಿ ಕಚೇರಿಯ ಪ್ರಧಾನ ಮಹಾನಿರ್ದೇಶಕ ಧೀರೇಂದ್ರ ಓಜಾ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande