ಹಸಿರು ಇಂಧನ ಕ್ಷೇತ್ರದಲ್ಲಿ ಭಾರತ–ಸಿಂಗಾಪುರ ಸಹಕಾರ ವಿಸ್ತರಣೆಗೆ ಚರ್ಚೆ: ಪ್ರಲ್ಹಾದ ಜೋಶಿ
ಹಸಿರು ಜಲಜನಕ, ಕಡಲ ಇಂಧನ, ವಿದ್ಯುತ್ ಬ್ಯಾಟರಿ ಉತ್ಪಾದನೆ ಮತ್ತು ನವೀಕರಿಸಬಹುದಾದ ಇಂಧನ ಹೂಡಿಕೆಗೆ ಒತ್ತು
ಪ್ರಹ್ಲಾದ ಜೋಶಿ ಹಂಚಿಕೊಂಡಿರುವ ಪೋಟೋ


ಪ್ರಹ್ಲಾದ ಜೋಶಿ ಹಂಚಿಕೊಂಡಿರುವ ಪೋಟೋ


ನವದೆಹಲಿ, 16 ನವೆಂಬರ್ (ಹಿ.ಸ.):

ನವೀಕರಿಸಬಹುದಾದ ಇಂಧನ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ಭಾರತ ಹಾಗೂ ಸಿಂಗಾಪುರ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಿಂಗಾಪುರದ ಇಂಧನ, ವ್ಯಾಪಾರ ಮತ್ತು ಕೈಗಾರಿಕಾ ಸಚಿವ ಡಾ. ಟಾನ್ ಸೀ ಲೆಂಗ್ ಅವರೊಂದಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚರ್ಚೆ ನಡೆಸಿದ್ದಾರೆ.

ನಾಲ್ಕನೇ ಭಾರತ–ಸಿಂಗಾಪುರ ಹ್ಯಾಕಥಾನ್–2026ರ ಹಿನ್ನೆಲೆಯಲ್ಲಿ ನಡೆದ ಈ ಮಾತುಕತೆಯಲ್ಲಿ ಹಸಿರು ಜಲಜನಕ, ಹಸಿರು ಇಂಧನ ಹಾಗೂ ಕಡಲ ಸಾರಿಗೆಯಲ್ಲಿ ಇಂಗಾಲದ ಹೊರಸೂಸುವಿಕೆ ತಗ್ಗಿಸುವ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸಾಧ್ಯತೆಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ಪ್ರಲ್ಹಾದ ಜೋಶಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಭಾರತದ ಹೆಚ್ಚುತ್ತಿರುವ ಹಸಿರು ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಜಾಗತಿಕ ಕಡಲ ಸಾರಿಗೆ ಮತ್ತು ಹಡಗುಗಳಿಗೆ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಸಿಂಗಾಪುರದ ಸಾಮರ್ಥ್ಯದೊಂದಿಗೆ ಬೆಸೆಯುವ ಕುರಿತು ಚರ್ಚಿಸಲಾಗಿದೆ. ಅಲ್ಲದೆ, ಇಂಧನ ಸಂಗ್ರಹಣೆ, ಕಡಲಾಚೆಯ ಪವನ ವಿದ್ಯುತ್ ಉತ್ಪಾದನೆ, ವಿದ್ಯುತ್ ಬ್ಯಾಟರಿ ತಯಾರಿಕೆ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆಯೂ ವಿಚಾರ ವಿನಿಮಯ ನಡೆದಿದೆ.

ಭಾರತದ ಬೃಹತ್ ಉತ್ಪಾದನಾ ಸಾಮರ್ಥ್ಯ, ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳು ಮತ್ತು ಬೆಳೆಯುತ್ತಿರುವ ಕೈಗಾರಿಕಾ ವ್ಯವಸ್ಥೆಯು ಸಿಂಗಾಪುರದ ಹಡಗು ಸಾಗಣೆ, ಹಣಕಾಸು ಹಾಗೂ ತಂತ್ರಜ್ಞಾನ ಕ್ಷೇತ್ರಗಳ ಸಾಮರ್ಥ್ಯಕ್ಕೆ ಪೂರಕವಾಗಿವೆ. ಉಭಯ ದೇಶಗಳ ಸಹಭಾಗಿತ್ವವು ಸುಸ್ಥಿರ ಶುದ್ಧ ಇಂಧನ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದರ ಜತೆಗೆ ಜಾಗತಿಕ ಇಂಧನ ಪರಿವರ್ತನೆಗೆ ವೇಗ ನೀಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಜೋಶಿ ಅಭಿಪ್ರಾಯಪಟ್ಟಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande