
ನವದೆಹಲಿ, 16 ನವೆಂಬರ್ (ಹಿ.ಸ.):
ಹೈದರಾಬಾದ್ನಲ್ಲಿ ನಡೆದ ಭಾರತ ಸಮಾವೇಶವನ್ನು ದೇಶದ ವಿರುದ್ಧದ ವೇದಿಕೆಯಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಹಾಗೂ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಘನತೆಗೆ ಧಕ್ಕೆ ತರುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ದೂರಿದೆ.
ಸೋಮವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಹೂಡಿಕೆ ಸಮಾವೇಶಗಳನ್ನು ಆಯೋಜಿಸಲಾಗುತ್ತಿತ್ತು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಮತ್ತು ರಾಜ್ಯಗಳ ಆರ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶದಿಂದ ಇಂತಹ ಸಮಾವೇಶಗಳನ್ನು ನಡೆಸಲಾಗುತ್ತದೆ. ಆದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಇಂತಹ ವೇದಿಕೆಗಳನ್ನು ದೇಶದ ಹಿತಾಸಕ್ತಿಗೆ ಬಳಸುವ ಬದಲು ಅರಾಜಕತೆ ಸೃಷ್ಟಿಸಲು ಹಾಗೂ ಭಾರತವನ್ನು ಅಸ್ಥಿರಗೊಳಿಸಲು ಬಳಸುತ್ತಿರುವುದು ದುರದೃಷ್ಟಕರ ಎಂದು ಆರೋಪಿಸಿದರು.
ನವೆಂಬರ್ 14ರಂದು ಹೈದರಾಬಾದ್ನಲ್ಲಿ ನಡೆದ ಭಾರತ ಸಮಾವೇಶವು ಭಾರತ ಮತ್ತು ತೆಲಂಗಾಣದ ಅಭಿವೃದ್ಧಿಗೆ ಪೂರಕವಾಗಬಹುದಿತ್ತು. ಆದರೆ ದೇಶದ ಘನತೆಗೆ ಧಕ್ಕೆ ತರುವ ವೇದಿಕೆಯಾಗಿ ಅದನ್ನು ಬಳಸಿಕೊಳ್ಳಲಾಗಿದೆ ಎಂದು ಭಾಟಿಯಾ ಟೀಕಿಸಿದರು.
ಸಮಾವೇಶದಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿದ್ದ ಸಂದರ್ಭದಲ್ಲಿ ಯುರೋಪಿಯನ್ ಸಮಾಜವಾದಿಗಳ ಪಕ್ಷದ ಪ್ರಧಾನ ಕಾರ್ಯದರ್ಶಿ ಜಿಯಾಕೊಮೊ ಫಿಲಿಬೆಕ್ ವೇದಿಕೆಯಿಂದಲೇ 'ಮತಗಳ್ಳರು, ಅಧಿಕಾರ ಬಿಟ್ಟು ತೊಲಗಿ' ಎಂಬ ಘೋಷಣೆ ಕೂಗಿದರು. ಭಾರತೀಯ ಪ್ರಜಾಪ್ರಭುತ್ವ ಮತ್ತು ಜನಾದೇಶವನ್ನು ವಿದೇಶಿ ನಾಯಕನೊಬ್ಬ ಅಪಹಾಸ್ಯ ಮಾಡುತ್ತಿದ್ದಾಗ ರಾಹುಲ್ ಗಾಂಧಿ ಅದನ್ನು ತಡೆಯಲು ಏಕೆ ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸಿದರು.
ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆ ದೇಶದ ಆಂತರಿಕ ವಿಚಾರಗಳಾಗಿದ್ದು, ವಿದೇಶಿ ನಾಯಕರು ಅದರಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ರಾಹುಲ್ ಗಾಂಧಿ ಹೇಳಬೇಕಿತ್ತು. ಆದರೆ ಅವರು ಚಪ್ಪಾಳೆ ತಟ್ಟಿ ನಕ್ಕಿದ್ದಾರೆ ಎಂದು ಭಾಟಿಯಾ ಆರೋಪಿಸಿದರು.
ಸಮಾವೇಶಕ್ಕೆ ಸಂಬಂಧಿಸಿದ ವಿಡಿಯೊ ತುಣುಕು ಭಾರತೀಯರಿಗೆ ನೋವುಂಟುಮಾಡುವುದರ ಜತೆಗೆ ಮುಜುಗರ ಉಂಟುಮಾಡಿದೆ. ಭಾರತೀಯ ಪ್ರಜಾಪ್ರಭುತ್ವದ ಕುರಿತು ವಿದೇಶಿ ವ್ಯಕ್ತಿಯೊಬ್ಬರು ಟೀಕಿಸುತ್ತಿದ್ದಾಗ ರಾಹುಲ್ ಗಾಂಧಿ ಚಪ್ಪಾಳೆ ತಟ್ಟಿ ನಕ್ಕಿರುವುದು ಅತ್ಯಂತ ದುರದೃಷ್ಟಕರ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ದೇಶದ ಜನರ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ತೀವ್ರ ದ್ವೇಷ ಮತ್ತು ಸತತ ಚುನಾವಣಾ ಸೋಲುಗಳಿಂದ ರಾಹುಲ್ ಗಾಂಧಿ ರಾಜಕೀಯ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ ಎಂದು ಭಾಟಿಯಾ ಆರೋಪಿಸಿದರು. ಸ್ವಂತ ಬಲದಿಂದ ಚುನಾವಣೆಯಲ್ಲಿ ಗೆಲ್ಲಲಾಗದಷ್ಟು ದುರ್ಬಲರಾಗಿರುವ ರಾಹುಲ್ ಗಾಂಧಿ ಅವರಿಗೆ ವಿದೇಶಿ ಶಕ್ತಿಗಳ ನೆರವು ಅಗತ್ಯವಾಗಿದೆ ಎಂದು ಟೀಕಿಸಿದರು. ಜಿಯಾಕೊಮೊ ಫಿಲಿಬೆಕ್ ಅವರು ಭಾರತದ ವೇದಿಕೆಯಿಂದ ಮಾಡಿದ ಹೇಳಿಕೆಯನ್ನು ರಾಹುಲ್ ಗಾಂಧಿ ಬೆಂಬಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಭಾರತದ ಪ್ರಜಾಪ್ರಭುತ್ವ ಬಲಿಷ್ಠವಾಗಿದ್ದು, ಸದಾ ಬಲಿಷ್ಠವಾಗಿಯೇ ಉಳಿಯಲಿದೆ. ದೇಶದಲ್ಲಿ ಯಾರ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದನ್ನು ಭಾರತೀಯ ಮತದಾರರೇ ನಿರ್ಧರಿಸುತ್ತಾರೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ಯಾವುದೇ ವಿದೇಶಿ ನಾಯಕನ ಅನುಮೋದನೆಯ ಅಗತ್ಯವಿಲ್ಲ ಎಂದು ಭಾಟಿಯಾ ಹೇಳಿದರು.
ಭಾರತ ಸಮಾವೇಶದ ವೆಚ್ಚದ ಬಗ್ಗೆಯೂ ಪ್ರಶ್ನಿಸಿದ ಅವರು, ಭಾರತದ ಘನತೆಗೆ ಧಕ್ಕೆ ತರುವ ಹೇಳಿಕೆಗಳಿಗಾಗಿ ಸರ್ಕಾರಿ ಹಣ ಎಷ್ಟು ಖರ್ಚು ಮಾಡಲಾಗಿದೆ? ಸಮಾವೇಶದ ಆಯೋಜನೆಗೆ ಕಾಂಗ್ರೆಸ್ ಎಷ್ಟು ಹಣ ನೀಡಿದೆ? ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರ ಹಣದಿಂದ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ದೇಶದ ಹಿತಾಸಕ್ತಿಯೇ ಮುಖ್ಯವಾಗಿರಬೇಕು. ಆಯೋಜಕರು ಸಮಾವೇಶದ ಸಂಪೂರ್ಣ ವೆಚ್ಚದ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.