ರಷ್ಯಾ–ಉಕ್ರೇನ್ ಸಂಘರ್ಷ ಅಂತ್ಯಕ್ಕೆ ಭಾರತದಿಂದ ರಾಜತಾಂತ್ರಿಕ ಪ್ರಯತ್ನ
ನವದೆಹಲಿ, 10 ನವೆಂಬರ್ (ಹಿ.ಸ.): ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡಿ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಲು ಭಾರತ ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ಸಂಬಂಧಪಟ್ಟ ಇತರ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಸೋಮವಾರ ನಡೆದ ರಾಜತಾಂತ್ರಿ
भारतीय विदेश मंत्रालय के प्रवक्ता रणधीर जायसवाल


ನವದೆಹಲಿ, 10 ನವೆಂಬರ್ (ಹಿ.ಸ.):

ರಷ್ಯಾ–ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡಿ ಪ್ರದೇಶದಲ್ಲಿ ಶಾಂತಿ ಮರುಸ್ಥಾಪಿಸಲು ಭಾರತ ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ಸಂಬಂಧಪಟ್ಟ ಇತರ ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಸೋಮವಾರ ನಡೆದ ರಾಜತಾಂತ್ರಿಕ ಮಾತುಕತೆಗಳಲ್ಲಿ ಸಂಘರ್ಷ ಅಂತ್ಯಗೊಳಿಸುವುದರ ಜತೆಗೆ ಆಹಾರ ಸಾಗಣೆ ಮಾರ್ಗದ ಬಗ್ಗೆಯೂ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಮಂಗಳವಾರ ನಡೆದ ನಿಯಮಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಏಕೈಕ ಮಾರ್ಗ ಎಂದು ಭಾರತ ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂದರು.

ಇತ್ತೀಚಿನ ತಿಂಗಳುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂತ್ಯವಿಲ್ಲದ ಯುದ್ಧಕ್ಕೆ ಕೊನೆ ಹಾಡಲೇಬೇಕು ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಪ್ಪು ಸಮುದ್ರದಲ್ಲಿ ಹಡಗು ಸಂಚಾರದ ಸುರಕ್ಷತೆ, ಧಾನ್ಯ ಮತ್ತು ಇಂಧನ ರಫ್ತಿಗೆ ಸಂಬಂಧಿಸಿದಂತೆ ರಷ್ಯಾ ಹಾಗೂ ಉಕ್ರೇನ್ ಹೊಂದಿರುವ ತುರ್ತು ಕಳವಳಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ದಾಳಿಗಳನ್ನು ನಿಲ್ಲಿಸುವ ಸಾಧ್ಯತೆಗಳ ಕುರಿತು ಭಾರತ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ಝೆಲೆನ್ಸ್ಕಿ ಜತೆ ಮೋದಿ ದೂರವಾಣಿ ಮಾತುಕತೆ

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಸ್ತುತ ಸಂಘರ್ಷ, ಅದರ ಮಾನವೀಯ ಪರಿಣಾಮಗಳು ಹಾಗೂ ಶಾಂತಿ ಮರುಸ್ಥಾಪನೆಗೆ ನಡೆಯುತ್ತಿರುವ ವಿವಿಧ ಪ್ರಯತ್ನಗಳ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು.

ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ರೀತಿಯ ಕೊಡುಗೆ ನೀಡಲು ಭಾರತದ ದೃಢ ಬದ್ಧತೆಯನ್ನು ಪ್ರಧಾನಿ ಪುನರುಚ್ಚರಿಸಿದ್ದರು.

ಜೈಶಂಕರ್–ಲಾವ್ರೊವ್ ಮಾತುಕತೆ

ಪ್ರಧಾನಿ ಮೋದಿ ಅವರ ಮಾತುಕತೆಯ ಬಳಿಕ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಚರ್ಚೆ ನಡೆಸಿದರು.

ಸಂಘರ್ಷಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಕುರಿತು ಉಭಯ ನಾಯಕರು ಚರ್ಚಿಸಿದರು. ಆಹಾರ ಸಾಗಣೆ ಮಾರ್ಗದ ವಿಷಯವಾಗಿಯೂ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಾಯಿತು ಎಂದು ರಣಧೀರ್ ಜೈಸ್ವಾಲ್ ತಿಳಿಸಿದರು.

ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆಗೆ ಕೊಡುಗೆ ನೀಡುವ ಉದ್ದೇಶದಿಂದ ಭಾರತ ಸಂಘರ್ಷದಲ್ಲಿರುವ ಎರಡೂ ರಾಷ್ಟ್ರಗಳ ಜತೆಗೆ ಇತರ ಸಂಬಂಧಪಟ್ಟ ರಾಷ್ಟ್ರಗಳೊಂದಿಗೂ ಸಂಪರ್ಕದಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande