ಬ್ರಿಟನ್ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕ್ಯಾಪ್ಟನ್ ಅಜಯ್ ಪಂತ್ ನೆರವಿಗೆ ಭಾರತದ ರಾಜತಾಂತ್ರಿಕ ಪ್ರಯತ್ನ
ನವದೆಹಲಿ, 10 ನವೆಂಬರ್ (ಹಿ.ಸ.): ಬ್ರಿಟನ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ವಾಣಿಜ್ಯ ಅಧಿಕಾರಿ ಕ್ಯಾಪ್ಟನ್ ಅಜಯ್ ಪಂತ್ ಅವರ ಕುಟುಂಬ ಮತ್ತು ವಕೀಲರೊಂದಿಗೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
कैप्टन अजय पंत


ನವದೆಹಲಿ, 10 ನವೆಂಬರ್ (ಹಿ.ಸ.):

ಬ್ರಿಟನ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ ವಾಣಿಜ್ಯ ಅಧಿಕಾರಿ ಕ್ಯಾಪ್ಟನ್ ಅಜಯ್ ಪಂತ್ ಅವರ ಕುಟುಂಬ ಮತ್ತು ವಕೀಲರೊಂದಿಗೆ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಕ್ಯಾಪ್ಟನ್ ಪಂತ್ ಅವರ ಆರೋಗ್ಯ ವಿಚಾರಿಸಲು ಹಾಗೂ ಅವರ ಪತ್ನಿಗೆ ಭೇಟಿಯ ಅವಕಾಶ ಕಲ್ಪಿಸಲು ಭಾರತೀಯ ಹೈಕಮಿಷನ್ ಹಲವು ಬಾರಿ ರಾಜತಾಂತ್ರಿಕ ಭೇಟಿಗಳನ್ನು ನಡೆಸಿದೆ. ಇತ್ತೀಚಿನ ಭೇಟಿ ನವೆಂಬರ್ ಮೊದಲ ವಾರದಲ್ಲಿ ನಡೆದಿತ್ತು ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನ್ ಹಾಗೂ ಅಲ್ಲಿನ ವಿದೇಶಾಂಗ ಸಚಿವಾಲಯದೊಂದಿಗೆ ಭಾರತ ರಾಜತಾಂತ್ರಿಕ ಮಾತುಕತೆ ಮುಂದುವರಿಸಿದೆ ಎಂದು ತಿಳಿಸಿದರು.

ಟ್ಯಾಂಕರ್ ತಡೆದ ಕ್ರಮದ ಕಾನೂನುಬದ್ಧತೆ ಪ್ರಶ್ನೆ

ಕ್ಯಾಪ್ಟನ್ ಅಜಯ್ ಪಂತ್ ಅವರ ಕಾನೂನು ತಂಡವು ಡಿಸೆಂಬರ್‌ನಲ್ಲಿ ನಡೆಯಲಿರುವ ವಿಚಾರಣೆಗೆ ಮುನ್ನ ನವೆಂಬರ್ 11ರಿಂದ 13ರವರೆಗೆ ನಡೆಯುವ ವಿಚಾರಣೆಯಲ್ಲಿ ಟ್ಯಾಂಕರ್ ಹಡಗನ್ನು ತಡೆದ ಕ್ರಮದ ಕಾನೂನುಬದ್ಧತೆಯನ್ನು ಪ್ರಶ್ನಿಸಲು ಸಿದ್ಧತೆ ನಡೆಸಿದೆ.

ಹಡಗಿನ ಕಾರ್ಯಾಚರಣೆ ನಡೆಸುವ ಮೂಲಕ ರಷ್ಯಾ ವಿರುದ್ಧ ಬ್ರಿಟನ್ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕ್ಯಾಪ್ಟನ್ ಪಂತ್ ಅವರ ಮೇಲಿದೆ.

ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಬ್ರಿಟನ್ ಸೇನೆ ಎಂ.ವಿ. ಸ್ಮಿರ್ಟೋಸ್ ಹೆಸರಿನ ತೈಲ ಸಾಗಣೆ ಹಡಗನ್ನು ತಡೆದಿತ್ತು. ಈ ಹಡಗು ರಷ್ಯಾದ ಕಚ್ಚಾ ತೈಲ ಸಾಗಿಸುತ್ತಿದ್ದ ರಹಸ್ಯ ಹಡಗುಗಳ ಸಮೂಹದ ಭಾಗವಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಜೂನ್ 14ರಿಂದ ನ್ಯಾಯಾಂಗ ಬಂಧನ

ಭಾರತೀಯ ವಾಣಿಜ್ಯ ನೌಕಾಪಡೆಯ ಅಧಿಕಾರಿ ಕ್ಯಾಪ್ಟನ್ ಅಜಯ್ ಪಂತ್ ಅವರು ಜೂನ್ 14ರಿಂದ ಬ್ರಿಟನ್‌ನ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬ್ರಿಟನ್ ವಿಧಿಸಿರುವ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪ ಅವರ ಮೇಲಿದೆ.

ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ಅವರಿಗೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅವರ ಕಾನೂನು ಹೋರಾಟಕ್ಕೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಭಾರತ ರಾಜತಾಂತ್ರಿಕ ಸಂಪರ್ಕ ಮುಂದುವರಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande