
ನವದೆಹಲಿ, 10 ನವೆಂಬರ್ (ಹಿ.ಸ.):
ಡಿಜಿಟಲ್ ಸಂಪರ್ಕದಿಂದ ಕೊಂಚ ವಿರಾಮ ಪಡೆದು ಕೈಬರಹದ ಸಂದೇಶಗಳ ಮೂಲಕ ಆತ್ಮೀಯರೊಂದಿಗೆ ಬೆರೆಯುವ ಉದ್ದೇಶದಿಂದ ಅಂಚೆ ಇಲಾಖೆ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆ ಜಂಟಿಯಾಗಿ ‘ಡಿಜಿಟಲ್ ವಿರಾಮ 2.0’ ಅಭಿಯಾನ ಆಯೋಜಿಸಿವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆರಂಭಿಸಲಾದ ಈ ಅಭಿಯಾನದಡಿ 11 ನಗರಗಳ ನಡುವೆ ಸಂಚರಿಸುವ 15 ಇಂಡಿಗೋ ವಿಮಾನಗಳಲ್ಲಿ ಪ್ರಯಾಣಿಕರಿಗೆ ಕೈಬರಹದ ಅಂಚೆಪತ್ರ ಮತ್ತು ಶುಭಾಶಯ ಪತ್ರಗಳ ಮೂಲಕ ತಮ್ಮ ಆತ್ಮೀಯರಿಗೆ ಹಬ್ಬದ ಶುಭಾಶಯ ಕಳುಹಿಸುವ ಅವಕಾಶ ಕಲ್ಪಿಸಲಾಯಿತು.
ಕೇಂದ್ರ ಸಂವಹನ ಸಚಿವಾಲಯದ ಅಂಚೆ ಇಲಾಖೆಯು ಇಂಡಿಗೋ ಸಹಯೋಗದಲ್ಲಿ ಈ ಅಭಿಯಾನದ ಎರಡನೇ ಆವೃತ್ತಿಯನ್ನು ಆಯೋಜಿಸಿದೆ. ಚಂಡೀಗಢ, ರಾಂಚಿ, ಬಾಗ್ಡೋಗ್ರಾ, ದೆಹಲಿ, ಮುಂಬೈ, ಗೋವಾ, ಪುಣೆ, ಅಹಮದಾಬಾದ್, ಕೋಲ್ಕತ್ತಾ, ವಾರಾಣಸಿ ಮತ್ತು ಜೈಪುರ ನಗರಗಳನ್ನು ಸಂಪರ್ಕಿಸುವ 15 ವಿಮಾನಗಳಲ್ಲಿ ಪ್ರಯಾಣಿಕರಿಗೆ ವಿಶೇಷ ಡಿಜಿಟಲ್ ವಿರಾಮದ ಕಿಟ್ಗಳನ್ನು ವಿತರಿಸಲಾಯಿತು.
ಈ ಕಿಟ್ಗಳಲ್ಲಿ ಅಂಚೆಪತ್ರಗಳು, ಶುಭಾಶಯ ಪತ್ರಗಳು, ದೀಪಾವಳಿಯ ವಿಶೇಷ ಅಲಂಕಾರಿಕ ಚೀಟಿಗಳು ಹಾಗೂ ಸ್ವತಃ ಅಂಚೆಪತ್ರ ಸಿದ್ಧಪಡಿಸಲು ಅಗತ್ಯವಾದ ಸಾಮಗ್ರಿಗಳನ್ನು ಒದಗಿಸಲಾಗಿತ್ತು. ಪ್ರಯಾಣದ ವೇಳೆ ಮೊಬೈಲ್ ಮತ್ತು ಇತರ ವಿದ್ಯುನ್ಮಾನ ಪರದೆಗಳಿಂದ ದೂರವಿದ್ದು, ತಮ್ಮ ಕೈಯಿಂದಲೇ ವೈಯಕ್ತಿಕ ಸಂದೇಶಗಳನ್ನು ಬರೆಯಲು ಪ್ರಯಾಣಿಕರನ್ನು ಪ್ರೋತ್ಸಾಹಿಸುವುದು ಅಭಿಯಾನದ ಉದ್ದೇಶವಾಗಿತ್ತು.
ಕೈಬರಹದ ಸಂದೇಶಗಳಿಗೆ ಪ್ರಯಾಣಿಕರ ಮೆಚ್ಚುಗೆ
ಅಭಿಯಾನದ ಮೊದಲ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು ಅಂಚೆ ಇಲಾಖೆ ತಿಳಿಸಿದೆ. ಡಿಜಿಟಲ್ ಯುಗದಲ್ಲಿ ಮರೆಯಾಗುತ್ತಿರುವ ಕೈಬರಹದ ಪತ್ರಗಳ ಸಂಪ್ರದಾಯವನ್ನು ಮತ್ತೆ ಜನಪ್ರಿಯಗೊಳಿಸುವ ಪ್ರಯತ್ನ ಇದಾಗಿದೆ.
ಅಭಿಯಾನದಲ್ಲಿ ಭಾಗವಹಿಸಿದ ಪ್ರಯಾಣಿಕರು ಈ ಉಪಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಸುಮಾರು 30 ಸಾವಿರ ಅಡಿ ಎತ್ತರದಲ್ಲಿ ಕುಳಿತು ಅಂಚೆಪತ್ರ ಬರೆಯುವುದು ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಮತ್ತೊಬ್ಬ ಪ್ರಯಾಣಿಕರು ಮೊದಲ ಬಾರಿಗೆ ಅಂಚೆಪತ್ರ ಬರೆಯುವ ಅನುಭವ ವಿಶೇಷವಾಗಿತ್ತು ಎಂದು ಸಂತಸ ಹಂಚಿಕೊಂಡಿದ್ದಾರೆ. ಕೈಯಿಂದ ಬರೆದು ದೀಪಾವಳಿ ಶುಭಾಶಯ ಕಳುಹಿಸುವುದು ಸಾಮಾನ್ಯ ಡಿಜಿಟಲ್ ಸಂದೇಶಗಳಿಗಿಂತ ಹೆಚ್ಚು ಆತ್ಮೀಯತೆ ಮತ್ತು ಭಾವನಾತ್ಮಕ ಸ್ಪರ್ಶ ಹೊಂದಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.