
ಬೆಂಗಳೂರು, 01 ನವೆಂಬರ್ (ಹಿ.ಸ.):
ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಲ್ಲಿನ ಕಾನೂನು ಮತ್ತು ಭೂಮಿಯ ಗೌರವವನ್ನು ಕಾಪಾಡಬೇಕು. ನಮ್ಮ ಭೂಮಿಯಲ್ಲಿ ವಾಸಿಸುವವರು ಈ ನೆಲಕ್ಕೆ ಗೌರವ ನೀಡಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕರಾಳ ದಿನ ಆಚರಿಸಿರುವ ಕುರಿತು ಪ್ರತಿಕ್ರಿಯಿಸಿದರು.
ಕನ್ನಡಿಗರು ಹಾಗೂ ಮರಾಠಿಗರು ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಇಲ್ಲಿನ ಗೌರವವನ್ನು ಕಾಪಾಡಬೇಕು ಎಂದರು.
ಯಾವುದೇ ಕನ್ನಡಪರ ಸಂಘಟನೆಗಳು ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೇಲೆ ದಾಳಿ ಮಾಡಲು ಮುಂದಾಗಬಾರದು. ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ನೈತಿಕ ಪೊಲೀಸ್ಗಿರಿ ನಡೆಸಲು ಅವಕಾಶವಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಇದೆ. ಯಾವುದೇ ದೂರು ಅಥವಾ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ತರಬೇಕು. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕನ್ನಡ ಹೋರಾಟಗಾರರ ಪ್ರಕರಣ ವಾಪಸ್ಗೆ ಸೂಚನೆ
ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಕಡತಗಳು ಸಿದ್ಧವಾಗುತ್ತಿವೆ. ಇಂತಹ ಪ್ರಕರಣಗಳಿಂದ ಹೋರಾಟಗಾರರಿಗೆ ಮುಕ್ತಿ ನೀಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ. ಆದರೆ, ಇದೇ ಸಂದರ್ಭದಲ್ಲಿ ಮತ್ತೆ ಕಾನೂನು ಕೈಗೆತ್ತಿಕೊಂಡರೆ ಪ್ರಕರಣ ಹಿಂಪಡೆಯಲು ಪೊಲೀಸರು ಆಕ್ಷೇಪ ವ್ಯಕ್ತಪಡಿಸಬಹುದು. ಹೀಗಾಗಿ ಕಾನೂನು ಉಲ್ಲಂಘಿಸದೆ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕನ್ನಡ ಭಾಷೆ ಮತ್ತು ಕರ್ನಾಟಕದ ಜನರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಈ ಜವಾಬ್ದಾರಿಯನ್ನು ಸರ್ಕಾರವೇ ನಿರ್ವಹಿಸಲಿದೆ. ಯಾರೂ ಕಾನೂನು ಉಲ್ಲಂಘಿಸುವ ಮೂಲಕ ಸಮಸ್ಯೆ ಸೃಷ್ಟಿಸಬಾರದು ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.