ಸ್ಟಿಂಗ್ ಆಪರೇಷನ್ ಪ್ರಕರಣ: ಹೆಚ್ಡಿಕೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
‘ತಾಂತ್ರಿಕ ಸಾಕ್ಷ್ಯಗಳು ಕೇವಲ ಟ್ರೈಲರ್, ಅಸಲಿ ಸಿನಿಮಾ ಇನ್ನೂ ಬಾಕಿ’ ಎಂದ ಗೃಹ ಸಚಿವ
Priyank-Kharge-Slams-HDK-Over-Sting-Operation-Case


ಕಲಬುರಗಿ, 01 ನವೆಂಬರ್ (ಹಿ.ಸ.):

ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಬಹಿರಂಗವಾಗಿದ್ದು, ತಾಂತ್ರಿಕ ಸಾಕ್ಷ್ಯಗಳು ಕೇವಲ ಟ್ರೈಲರ್ ಮಾತ್ರ, ಅಸಲಿ ಸಿನಿಮಾ ಇನ್ನೂ ಬಾಕಿ ಇದೆ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಪ್ರಕರಣದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿದೆ. ತನಿಖೆ ವೇಳೆ ಕೆಲವರು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ.

ಇಂತಹ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ತನಿಖೆಗೆ ಸಹಕಾರ ನೀಡಬೇಕಿತ್ತು ಎಂದು ತಿಳಿಸಿದರು.

ತನಿಖೆಯಲ್ಲಿ ಆರೋಪಿತ ವ್ಯಕ್ತಿಗಳಿಗೂ ದೆಹಲಿ ಮೂಲದ ವ್ಯಕ್ತಿಯೊಬ್ಬನಿಗೂ ಸಂಪರ್ಕ ಇರುವುದು ಬೆಳಕಿಗೆ ಬಂದಿದೆ. ಆತನ ಹೇಳಿಕೆ ಆಧರಿಸಿ ಮತ್ತೊಬ್ಬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ.

ಈ ಇಬ್ಬರೂ ದೆಹಲಿಯ ಕರೋಲ್ಬಾಗ್ನಲ್ಲಿ ಮೊಬೈಲ್ ಖರೀದಿಸಿ ಅಲ್ಲಿಂದ ಎಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿದ್ದಾರೆ. ಈ ಎಲ್ಲ ಘಟನೆಗಳಿಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿ ಇವೆ. ಅವರಿಗೆ ಹಣ ಎಲ್ಲಿಂದ ಬಂದಿದೆ ಎಂಬುದರ ಬಗ್ಗೆಯೂ ಮಾಹಿತಿ ಮತ್ತು ದಾಖಲೆಗಳಿವೆ ಎಂದು ಹೇಳಿದರು.

ಕುಮಾರಸ್ವಾಮಿಗೆ ನಾಚಿಕೆಯಾಗಬೇಕು:

ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಗಳು ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕ ಹೊಂದಿರುವುದಕ್ಕೆ ದಾಖಲೆಗಳಿವೆ. ಆದರೂ ಕುಮಾರಸ್ವಾಮಿ ಅದೇ ರಾಗ ಹಾಡುತ್ತಿದ್ದಾರೆ. ನಮ್ಮ ವಿರುದ್ಧ ಹಾಗೂ ನಮ್ಮ ತಂದೆಯವರ ವಿರುದ್ಧ ಆರೋಪ ಮಾಡಿದವರು, ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ವ್ಯಕ್ತಿಗಳು ಕುಮಾರಸ್ವಾಮಿ ಅವರ ಕಡೆಯವರೇ ಆಗಿರುವುದಕ್ಕೆ ಉತ್ತರಿಸಬೇಕು. ಕುಮಾರಸ್ವಾಮಿಗೆ ಸ್ವಲ್ಪವಾದರೂ ಕಾಮನ್ ಸೆನ್ಸ್ ಇದೆಯೇ? ಅವರಿಗೆ ನಾಚಿಕೆಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತನಿಖೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಈವರೆಗೆ ಮೌನವಾಗಿದ್ದೆವು. ಆದರೆ ಈಗ ಒಂದೊಂದೇ ಸತ್ಯ ಹೊರಬರುತ್ತಿದೆ. ಆರೋಪಿತರು ನಿರೀಕ್ಷಣಾ ಜಾಮೀನು ಪಡೆಯಲು ಯಾಕೆ ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೂ ಉತ್ತರ ನೀಡಬೇಕು. ತನಿಖೆ ಇನ್ನೂ ಮುಂದುವರಿದಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವನಾಗಿದ್ದೇನೆ ಎಂಬ ಕಾರಣಕ್ಕೆ ಕಾನೂನನ್ನು ಮೀರಿ ನಡೆದುಕೊಳ್ಳಲು ಸಾಧ್ಯವಿಲ್ಲ. ಕುಮಾರಸ್ವಾಮಿ ಅವರಂತೆ ನಾನು ಹಿಟ್ ಆ್ಯಂಡ್ ರನ್ ರಾಜಕಾರಣ ಮಾಡುವುದಿಲ್ಲ. ದಾಖಲೆಗಳನ್ನು ಇಟ್ಟುಕೊಂಡೇ ಮಾತನಾಡುತ್ತಿದ್ದೇವೆ. ಈ ದಾಖಲೆಗಳನ್ನು ಕುಮಾರಸ್ವಾಮಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.

ತನಿಖೆ ಈಗ ಇಂಟರ್ವೆಲ್ ಹಂತಕ್ಕೆ ಬಂದಿದೆ. ತಾಂತ್ರಿಕ ಸಾಕ್ಷ್ಯಗಳು ಕೇವಲ ಟ್ರೈಲರ್ ಅಷ್ಟೇ, ಅಭಿ ಪಿಕ್ಚರ್ ಬಾಕಿ ಹೈ ಎಂದು ಹೇಳುವ ಮೂಲಕ ಕುಮಾರಸ್ವಾಮಿ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದರು. ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಗತಿಗಳು ಬಹಿರಂಗವಾಗಲಿವೆ ಎಂಬ ಸುಳಿವನ್ನೂ ನೀಡಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande