
ಬೆಂಗಳೂರು, 01 ನವೆಂಬರ್ (ಹಿ.ಸ.):
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪ್ರಕರಣದಲ್ಲಿ ಬಳಸಲಾಗಿದ್ದ ಮೊಬೈಲ್ ಫೋನ್ಗಳನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿಯೇ ಹಸ್ತಾಂತರಿಸಲಾಗಿದೆ ಎಂದು ಆರೋಪಿ ರಿತೇಶ್ ಪಾಂಡೆ ವಿಚಾರಣೆ ವೇಳೆ ತಿಳಿಸಿರುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಅಕ್ಟೋಬರ್ 24ರಂದು ಕೇಂದ್ರ ಅಪರಾಧ ವಿಭಾಗದ ಸೈಬರ್ ಅಪರಾಧ ವಿಭಾಗದ ಪೊಲೀಸರು ರಿತೇಶ್ ಪಾಂಡೆಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆ ವೇಳೆ ರಿತೇಶ್ ಪಾಂಡೆ ಮಾತ್ರವಲ್ಲದೆ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ ಎಂಬುವವರ ಪಾತ್ರವೂ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಪ್ರಜ್ವಲ್ ಪ್ರಸಾದ್ ನೀಡಿದ ಸೂಚನೆಯಂತೆ ವಿನೋದ್ ಶರ್ಮಾ ಮತ್ತು ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್ನಲ್ಲಿರುವ ಅಂಗಡಿಯೊಂದಕ್ಕೆ ತೆರಳಿ ಮೊಬೈಲ್ ಫೋನ್ಗಳನ್ನು ಖರೀದಿಸಿದ್ದರು. ಬಳಿಕ ಆ ಮೊಬೈಲ್ಗಳನ್ನು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕೃತ ನಿವಾಸಕ್ಕೆ ತೆಗೆದುಕೊಂಡು ಹೋಗಿ ಪ್ರಜ್ವಲ್ ಪ್ರಸಾದ್ಗೆ ಹಸ್ತಾಂತರಿಸಲಾಗಿತ್ತು ಎಂದು ರಿತೇಶ್ ಪಾಂಡೆ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಕರಣದ ಮುಂದಿನ ತನಿಖೆಗಾಗಿ ವಿನೋದ್ ಶರ್ಮಾ ಮತ್ತು ಪ್ರಜ್ವಲ್ ಪ್ರಸಾದ್ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆದರೆ, ಇಬ್ಬರೂ ತಲೆಮರೆಸಿಕೊಂಡಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಇದೇ ವೇಳೆ, ರಿತೇಶ್ ಪಾಂಡೆ ಮತ್ತು ತಲೆಮರೆಸಿಕೊಂಡಿರುವ ಪ್ರಜ್ವಲ್ ಪ್ರಸಾದ್ ನಡುವೆ ನಡೆದಿರುವ ಅನುಮಾನಾಸ್ಪದ ಹಣಕಾಸು ವಹಿವಾಟುಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ಸೃಷ್ಟಿಕರ್ತರಾಗಿ ಸಕ್ರಿಯರಾಗಿದ್ದ ಈ ಮೂವರು ಯಾರ ಸೂಚನೆಯ ಮೇರೆಗೆ ಕೃತ್ಯ ಎಸಗಿದ್ದಾರೆ? ಇವರ ಹಿಂದೆ ಯಾರಾದರೂ ಪ್ರಭಾವಿಗಳಿದ್ದಾರೆಯೇ? ಎಂಬ ಆಯಾಮಗಳಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಮೊಬೈಲ್ ಖರೀದಿ, ಹಸ್ತಾಂತರ ಮತ್ತು ಹಣಕಾಸು ವಹಿವಾಟುಗಳ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಆರೋಪಿಗಳ ನಡುವಿನ ಸಂಪರ್ಕ ಹಾಗೂ ಕೃತ್ಯದ ಹಿಂದಿರುವವರ ಪಾತ್ರದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.