

ನವದೆಹಲಿ, 01 ನವೆಂಬರ್ (ಹಿ.ಸ.):
ದೇಶದಲ್ಲಿ ಅಕ್ರಮ ವಿದೇಶಿ ನುಸುಳುವಿಕೆಯನ್ನು ತಡೆಯುವುದು ಕೇಂದ್ರ ಗೃಹ ಸಚಿವಾಲಯದ ಜವಾಬ್ದಾರಿಯಾಗಿದ್ದು, ಈ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆಗಾರರಾಗುತ್ತಾರೆ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಮದನಿ ಹೇಳಿದ್ದಾರೆ.
ಹರಿಯಾಣದ ನುಹ್ (ಮೇವಾತ್)ನಲ್ಲಿ ಅಕ್ಟೋಬರ್ 30 ಮತ್ತು 31ರಂದು ನಡೆದ ಜಮೀಯತ್ ಉಲೇಮಾ-ಎ-ಹಿಂದ್ನ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ದೇಶದ ವಿವಿಧ ಭಾಗಗಳಿಂದ 3 ಸಾವಿರಕ್ಕೂ ಹೆಚ್ಚು ಧಾರ್ಮಿಕ ವಿದ್ವಾಂಸರು ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮದನಿ, ಭಾರತದಲ್ಲಿ ಯಾವುದೇ ವಿದೇಶಿ ಪ್ರಜೆಯ ಅಕ್ರಮ ನೆಲೆಸುವಿಕೆಯನ್ನು ತಮ್ಮ ಸಂಘಟನೆ ಬೆಂಬಲಿಸುವುದಿಲ್ಲ. ಆದರೆ, ಅಕ್ರಮ ನುಸುಳುವಿಕೆಯನ್ನು ತಡೆಯುವ ಜವಾಬ್ದಾರಿ ಗೃಹ ಸಚಿವಾಲಯದ್ದಾಗಿದೆ. ಈ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಗೃಹ ಸಚಿವರು ಉದ್ದೇಶಪೂರ್ವಕವಾಗಿ ವಿಫಲರಾದರೆ ಅಥವಾ ಅಕ್ರಮ ನುಸುಳುವಿಕೆಗೆ ಅವಕಾಶ ನೀಡಿದರೆ ಅವರೇ ದೇಶದ್ರೋಹಿಗಳಾಗುತ್ತಾರೆ ಎಂದು ಟೀಕಿಸಿದರು.
ಅಕ್ರಮ ನುಸುಳುವಿಕೆ ತಡೆಯಬೇಕಾದ ಸಚಿವಾಲಯದ ಹೊಣೆಗಾರಿಕೆಯನ್ನು ಪ್ರಶ್ನಿಸುವ ಬದಲು ಮುಸ್ಲಿಮರನ್ನು ರಾಜಕೀಯವಾಗಿ ಗುರಿಯಾಗಿಸಿಕೊಳ್ಳುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಜನಸಂಖ್ಯಾ ಬದಲಾವಣೆ ಕುರಿತು ಸ್ವತಂತ್ರ ಆಯೋಗಕ್ಕೆ ಒತ್ತಾಯ
ಮುಸ್ಲಿಮರ ಜನಸಂಖ್ಯೆ ಮತ್ತು ಜನಸಂಖ್ಯಾ ಬದಲಾವಣೆಗಳ ಕುರಿತು ಹರಡಲಾಗುತ್ತಿರುವ ತಪ್ಪು ಮಾಹಿತಿಗಳನ್ನು, ವಿಶೇಷವಾಗಿ 'ಜನಸಂಖ್ಯಾ ಜಿಹಾದ್' ಎಂಬ ಆರೋಪಗಳನ್ನು ತಳ್ಳಿಹಾಕಿ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ ಅಂಗೀಕರಿಸಿದೆ.
ಜನಗಣತಿ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಸಂಘಟನೆ, 1981ರಿಂದ 1991ರ ಅವಧಿಯಲ್ಲಿ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ದರ ಶೇ.32.9ರಷ್ಟಿತ್ತು. 2001ರಿಂದ 2011ರ ಅವಧಿಯಲ್ಲಿ ಇದು ಶೇ.24.7ಕ್ಕೆ ಇಳಿದಿದೆ ಎಂದು ತಿಳಿಸಿದೆ.
ಜನಸಂಖ್ಯೆಯಲ್ಲಿನ ಬದಲಾವಣೆಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವ ಬದಲು ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಆಧಾರದ ಮೇಲೆ ವೈಜ್ಞಾನಿಕವಾಗಿ ವಿಶ್ಲೇಷಿಸಬೇಕು ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಈ ಕುರಿತು ವಲಸೆ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲು ಅಂತರರಾಷ್ಟ್ರೀಯ ಮಟ್ಟದ ತಜ್ಞರನ್ನು ಒಳಗೊಂಡ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಆಯೋಗ ರಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಸಮಾನ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ
ಗುಜರಾತ್, ಉತ್ತರಾಖಂಡ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಪ್ರಯತ್ನಗಳ ವಿರುದ್ಧವೂ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ ಅಂಗೀಕರಿಸಿದೆ.
ಸಮಾನ ನಾಗರಿಕ ಸಂಹಿತೆಯು ಧಾರ್ಮಿಕ ಸ್ವಾತಂತ್ರ್ಯ, ಕೌಟುಂಬಿಕ ವಿಚಾರಗಳಲ್ಲಿನ ಸ್ವಾಯತ್ತತೆ ಹಾಗೂ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳಿಗೆ ಸವಾಲಾಗಿದೆ ಎಂದು ಸಂಘಟನೆ ಹೇಳಿದೆ.
ವಿವಾಹ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಇಸ್ಲಾಮಿಕ್ ನಿಯಮಗಳು ಕುರಾನ್ ಮತ್ತು ಹದೀಸ್ ಆಧರಿಸಿವೆ. ಇಂತಹ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಉತ್ತರಾಖಂಡ ಮತ್ತು ಗುಜರಾತ್ನಲ್ಲಿ ಪರಿಶಿಷ್ಟ ಪಂಗಡಗಳಿಗೆ ಸಮಾನ ನಾಗರಿಕ ಸಂಹಿತೆಯಿಂದ ವಿನಾಯಿತಿ ನೀಡಿ, ಮುಸ್ಲಿಮರನ್ನು ಅದರ ವ್ಯಾಪ್ತಿಗೆ ತರುವುದರ ಬಗ್ಗೆಯೂ ಸಂಘಟನೆ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸಂವಿಧಾನದ 14, 25 ಮತ್ತು 26ನೇ ವಿಧಿಗಳಲ್ಲಿ ಪ್ರತಿಪಾದಿಸಿರುವ ಸಮಾನತೆ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ತತ್ವಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾದ ವಿಚಾರ ಎಂದು ಹೇಳಿದೆ.
ಕಾನೂನು ಹೋರಾಟ ತೀವ್ರಗೊಳಿಸಲು ನಿರ್ಧಾರ
ಸಮಾನ ನಾಗರಿಕ ಸಂಹಿತೆ ವಿರುದ್ಧದ ಕಾನೂನು ಹೋರಾಟವನ್ನು ತೀವ್ರಗೊಳಿಸಲು ಸಭೆ ನಿರ್ಧರಿಸಿದೆ. ಉತ್ತರಾಖಂಡ, ಗುಜರಾತ್ ಮತ್ತು ಅಸ್ಸಾಂನ ಸಂಬಂಧಿತ ಕಾನೂನುಗಳನ್ನು ಉಚ್ಚ ನ್ಯಾಯಾಲಯಗಳು ಹಾಗೂ ಉಚ್ಚತಮ ನ್ಯಾಯಾಲಯದಲ್ಲಿ ಪ್ರಶ್ನಿಸಲು ತೀರ್ಮಾನಿಸಲಾಗಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಸಿಖ್, ಕ್ರೈಸ್ತ, ದಲಿತ, ಆದಿವಾಸಿ ಹಾಗೂ ಇತರ ಸಂಘಟನೆಗಳೊಂದಿಗೆ ಕೈಜೋಡಿಸಿ ವ್ಯಾಪಕ ಪ್ರಜಾಸತ್ತಾತ್ಮಕ ಅಭಿಯಾನ ನಡೆಸುವಂತೆಯೂ ಕರೆ ನೀಡಲಾಗಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಸಚಿವರು ಹಾಗೂ ಸಂಬಂಧಪಟ್ಟ ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.
ಬಹುಸಂಖ್ಯಾತ ಸಮುದಾಯ ಅಪಾಯದಲ್ಲಿದೆ ಎಂಬ ರಾಜಕೀಯ ನಿರೂಪಣೆಯ ಬಗ್ಗೆಯೂ ಮದನಿ ಪ್ರಶ್ನೆ ಎತ್ತಿದ್ದಾರೆ. ದೇಶದ ನಿಜವಾದ ಸವಾಲು ಬಹುಸಂಖ್ಯಾತ ಸಮುದಾಯದ ಸುರಕ್ಷತೆಯಲ್ಲ, ಬದಲಾಗಿ ಅಧಿಕಾರ ಮತ್ತು ರಾಜಕೀಯ ಸ್ಥಾನಮಾನಗಳ ಮೇಲಿನ ದುರಾಸೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಮರು ಶರಿಯತ್ ನಿಯಮಗಳ ಪಾಲನೆಗೆ ಬದ್ಧರಾಗಿರುವುದರ ಜತೆಗೆ ಕುಟುಂಬಗಳಲ್ಲಿ ಮಹಿಳೆಯರಿಗೆ ಹಕ್ಕು ಮತ್ತು ನ್ಯಾಯ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮದನಿ ಮನವಿ ಮಾಡಿದ್ದಾರೆ. ವಿಶೇಷವಾಗಿ ವಿಚ್ಛೇದನ, ಜೀವನಾಂಶ ಮತ್ತು ಮೆಹರ್ಗೆ ಸಂಬಂಧಿಸಿದ ವಿಷಯಗಳನ್ನು ಪ್ರಾಮಾಣಿಕತೆ ಹಾಗೂ ನ್ಯಾಯಯುತವಾಗಿ ನಿರ್ವಹಿಸುವಂತೆ ಕರೆ ನೀಡಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.