
ಬೆಂಗಳೂರು, 01 ನವೆಂಬರ್ (ಹಿ.ಸ.):
ಕರ್ನಾಟಕದ ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಬೆಂಗಳೂರು-ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಬೆಂಗಳೂರು-ಹುಬ್ಬಳ್ಳಿ-ಪುಣೆ ನಡುವೆ ಬುಲೆಟ್ ರೈಲು ಸಂಪರ್ಕ ಕಲ್ಪಿಸುವ ಯೋಜನೆಯನ್ನು ಘೋಷಿಸಿದೆ. ಅಲ್ಲದೆ, ಬಹುನಿರೀಕ್ಷಿತ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ನಾಲ್ಕೈದು ವಾರಗಳಲ್ಲಿ ಸಂಚಾರ ಆರಂಭಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬೆಂಗಳೂರಿನ ಎಸ್ಎಂವಿಟಿ ರೈಲು ನಿಲ್ದಾಣದಲ್ಲಿ ಭಾನುವಾರ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದ ಅವರು, ಕರ್ನಾಟಕದ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಳ್ಳಲಾಗುತ್ತಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಬೆಂಗಳೂರು ಮತ್ತು ಮುಂಬೈ ನಡುವೆ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿರುವ ನೂತನ ವಂದೇ ಭಾರತ್ ಸ್ಲೀಪರ್ ರೈಲು ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಹುಬ್ಬಳ್ಳಿ ಸೇರಿದಂತೆ ಈ ಮಾರ್ಗದ ವಿವಿಧ ನಗರಗಳ ಜನರಿಗೆ ಬೆಂಗಳೂರು ಮತ್ತು ಮುಂಬೈ ನಡುವೆ ವೇಗದ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಅವಕಾಶ ದೊರೆಯಲಿದೆ.
ಇದೇ ವೇಳೆ, ಬೆಂಗಳೂರು-ಹುಬ್ಬಳ್ಳಿ-ಪುಣೆ ನಡುವೆ ಹೈಸ್ಪೀಡ್ ಬುಲೆಟ್ ರೈಲು ಕಾರಿಡಾರ್ ನಿರ್ಮಿಸುವ ಯೋಜನೆಯನ್ನೂ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರದ ಎರಡನೇ ಹಂತದ 3,000 ಕಿ.ಮೀ. ಉದ್ದದ ಹೈಸ್ಪೀಡ್ ರೈಲು ಯೋಜನೆಯಲ್ಲಿ ಈ ಮಾರ್ಗವನ್ನು ಸೇರ್ಪಡೆಗೊಳಿಸಲಾಗುವುದು. ಇದರಿಂದ ಕರ್ನಾಟಕದ ರಾಜಧಾನಿ ಬೆಂಗಳೂರು, ಉತ್ತರ ಕರ್ನಾಟಕದ ಪ್ರಮುಖ ನಗರ ಹುಬ್ಬಳ್ಳಿ ಹಾಗೂ ಮಹಾರಾಷ್ಟ್ರದ ಪುಣೆ ನಡುವೆ ವೇಗದ ರೈಲು ಸಂಪರ್ಕ ಸಾಧ್ಯವಾಗಲಿದೆ.
ಈ ಹಿಂದೆ ಮೊದಲ ಹಂತದ 4,000 ಕಿ.ಮೀ. ಹೈಸ್ಪೀಡ್ ರೈಲು ಯೋಜನೆಯಲ್ಲಿ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಮಾರ್ಗಗಳನ್ನು ಘೋಷಿಸಲಾಗಿತ್ತು. ಈ ಯೋಜನೆಗಳು ಪೂರ್ಣಗೊಂಡರೆ ಬೆಂಗಳೂರು-ಚೆನ್ನೈ ನಡುವಿನ ಪ್ರಯಾಣದ ಅವಧಿ 73 ನಿಮಿಷಗಳಿಗೆ ಹಾಗೂ ಬೆಂಗಳೂರು-ಹೈದರಾಬಾದ್ ನಡುವಿನ ಪ್ರಯಾಣದ ಅವಧಿ 2 ಗಂಟೆ 10 ನಿಮಿಷಗಳಿಗೆ ಇಳಿಕೆಯಾಗುವ ನಿರೀಕ್ಷೆಯಿದೆ.
ಆದರೆ, ಕರ್ನಾಟಕದ ಒಳನಾಡು ಹಾಗೂ ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಯೋಜನೆಗೆ ಬೇಡಿಕೆ ಹೆಚ್ಚಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು-ಹುಬ್ಬಳ್ಳಿ-ಪುಣೆ ಮಾರ್ಗವನ್ನು ಎರಡನೇ ಹಂತದ ಯೋಜನೆಯಲ್ಲಿ ಸೇರಿಸಿರುವುದು ರಾಜ್ಯದ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ.
ಬೆಂಗಳೂರು-ಮಂಗಳೂರು ರೈಲು ಶೀಘ್ರ ಆರಂಭ
ಕರಾವಳಿ ಭಾಗದ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿರುವ ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಸಂಚಾರವೂ ಶೀಘ್ರ ಆರಂಭವಾಗಲಿದೆ. ಈ ಮಾರ್ಗದಲ್ಲಿ ಅಗತ್ಯ ತಾಂತ್ರಿಕ ಪರೀಕ್ಷೆಗಳು ಹಾಗೂ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿವೆ. ಮುಂದಿನ ನಾಲ್ಕೈದು ವಾರಗಳಲ್ಲಿ ರೈಲು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ ಎಂದು ಸಚಿವರು ತಿಳಿಸಿದರು.
16 ಬೋಗಿಗಳ ಸ್ಲೀಪರ್ ರೈಲು
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು 16 ಬೋಗಿಗಳನ್ನು ಒಳಗೊಂಡಿದೆ. ಇದರಲ್ಲಿ ಎಂಟು ಮೋಟಾರು ಬೋಗಿಗಳು, ನಾಲ್ಕು ಟ್ರೇಲರ್ ಬೋಗಿಗಳು, ಎರಡು ಚಾಲಕರಹಿತ ಟ್ರೇಲರ್ ಬೋಗಿಗಳು ಹಾಗೂ ಎರಡು ಚಾಲಕ ಬೋಗಿಗಳು ಇರಲಿವೆ.
ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಪ್ರಹ್ಲಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಸಂಸದರು ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.