ಬಂಗಾಳ ಕೊಲ್ಲಿಯಲ್ಲಿ ‘ಮುರಾಸು’ ಚಂಡಮಾರುತ ಸಕ್ರಿಯ: ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ
ನವದೆಹಲಿ, 01 ನವೆಂಬರ್ (ಹಿ.ಸ.): ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ‘ಮುರಾಸು’ ಚಂಡಮಾರುತವಾಗಿ ರೂಪಾಂತರಗೊಂಡಿದೆ. ಭಾನುವಾರ ಬೆಳಗ್ಗೆ 11.30ರ ವೇಳೆಗೆ ನೈಋತ್ಯ ಹಾಗೂ ಅದಕ್ಕೆ ಹೊಂದಿಕೊಂಡ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಕೇಂದ್ರೀಕೃತವಾಗಿತ್ತು. ಚಂಡಮಾರುತವು
चक्रवात की स्थिति की तस्वीर


ನವದೆಹಲಿ, 01 ನವೆಂಬರ್ (ಹಿ.ಸ.):

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ‘ಮುರಾಸು’ ಚಂಡಮಾರುತವಾಗಿ ರೂಪಾಂತರಗೊಂಡಿದೆ. ಭಾನುವಾರ ಬೆಳಗ್ಗೆ 11.30ರ ವೇಳೆಗೆ ನೈಋತ್ಯ ಹಾಗೂ ಅದಕ್ಕೆ ಹೊಂದಿಕೊಂಡ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಕೇಂದ್ರೀಕೃತವಾಗಿತ್ತು.

ಚಂಡಮಾರುತವು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಲಿದ್ದು, ನ. 2ರ ಬೆಳಗ್ಗೆಯ ವೇಳೆಗೆ ತೀವ್ರ ಚಂಡಮಾರುತವಾಗಿ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ ಹಂತದಲ್ಲಿ ವಾಯವ್ಯ ದಿಕ್ಕಿನಲ್ಲಿ ಚಲಿಸುವ ಚಂಡಮಾರುತವು ದಕ್ಷಿಣ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ನ. 2ರ ರಾತ್ರಿ 11.30ರಿಂದ ನ. 3ರ ಬೆಳಗಿನ ಜಾವ 4 ಗಂಟೆಯ ನಡುವಿನ ಅವಧಿಯಲ್ಲಿ ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿ ಪ್ರದೇಶದಲ್ಲಿ ಭೂಭಾಗ ಪ್ರವೇಶಿಸುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಗಂಟೆಗೆ 100ರಿಂದ 110 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ರಭಸದ ವೇಗ ಗಂಟೆಗೆ 120 ಕಿ.ಮೀ. ತಲುಪುವ ಸಾಧ್ಯತೆಯಿದೆ.

ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ

ಚಂಡಮಾರುತದ ಪ್ರಭಾವದಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಹಾಗೂ ಅತಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನ. 1 ಮತ್ತು 2ರಂದು ತಮಿಳುನಾಡಿನಲ್ಲಿ, ನ. 2 ಮತ್ತು 3ರಂದು ಕರಾವಳಿ ಆಂಧ್ರಪ್ರದೇಶ, ರಾಯಲಸೀಮೆ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ನ. 3 ಮತ್ತು 4ರಂದು ಛತ್ತೀಸ್‌ಗಢ ಹಾಗೂ ದಕ್ಷಿಣ ಒಡಿಶಾದಲ್ಲಿಯೂ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಪ್ರದೇಶಗಳಲ್ಲಿ ನ. 2 ಮತ್ತು 3ರಂದು ಕೆಲವು ಕಡೆ ಅತಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ನ. 3ರಂದು ತೆಲಂಗಾಣದ ಕೆಲವು ಪ್ರದೇಶಗಳಲ್ಲಿಯೂ ಅತಿ ಭಾರಿ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

ಚಂಡಮಾರುತದ ಚಲನೆಯ ದಿಕ್ಕು, ತೀವ್ರತೆ ಹಾಗೂ ಮಳೆಯ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ರಾಜ್ಯಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande