
ವಿಜಯಪುರ, 09 ಅಕ್ಟೋಬರ್ (ಹಿ.ಸ.)
‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ‘ಬೂತ್ ವಿಜಯ ಸಂಕಲ್ಪ ಯಾತ್ರೆ’ ಹಿನ್ನೆಲೆಯಲ್ಲಿ ವಿಜಯಪುರ ಮಹಾನಗರ ಪಾಲಿಕೆಯ ಪೌರಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ನಗರದ ಸ್ವಚ್ಛತೆ ಹಾಗೂ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರತಿದಿನವೂ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಈ ಸಂದರ್ಭದಲ್ಲಿ ಮುಖಂಡರು ಮುಕ್ತಕಂಠದಿಂದ ಶ್ಲಾಘಿಸಿದರು. ಬೆಳಗ್ಗಿನಿಂದಲೇ ನಗರದ ವಿವಿಧ ಬಡಾವಣೆಗಳು, ಪ್ರಮುಖ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರ ಪರಿಶ್ರಮವು ನಗರದ ಸ್ವಚ್ಛತೆಗೆ ಪ್ರಮುಖ ಆಧಾರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಪೌರಕಾರ್ಮಿಕರು ತಮ್ಮ ವೈಯಕ್ತಿಕ ಕಷ್ಟಗಳನ್ನು ಬದಿಗೊತ್ತಿ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಗಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶ್ರಮದಿಂದಲೇ ನಗರವನ್ನು ಸ್ವಚ್ಛವಾಗಿ ಹಾಗೂ ಸುಂದರವಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಹೀಗಾಗಿ ಪೌರಕಾರ್ಮಿಕರ ಆತ್ಮಗೌರವ, ಸುರಕ್ಷತೆ, ಕಲ್ಯಾಣ ಮತ್ತು ಸಾಮಾಜಿಕ ಗೌರವಕ್ಕೆ ಆದ್ಯತೆ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಮುಖಂಡರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಜಾರಿಗೊಂಡಿರುವ ‘ಸ್ವಚ್ಛ ಭಾರತ ಅಭಿಯಾನ’ ಸ್ವಚ್ಛತೆಯನ್ನು ಜನಾಂದೋಲನವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನಲ್ಲಿ ಪೌರಕಾರ್ಮಿಕರ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದು, ಅವರನ್ನು ‘ಸ್ವಚ್ಛತೆಯ ರಾಯಭಾರಿಗಳು’ ಎಂದು ಗೌರವಿಸುವ ಮೂಲಕ ಅವರ ಸೇವೆಗೆ ಸೂಕ್ತ ಮಾನ್ಯತೆ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.
‘ಸೇವಾ ಸಂಕಲ್ಪ ಅಭಿಯಾನ’ದ ಮೂಲಕ ಸಮಾಜದ ವಿವಿಧ ವರ್ಗಗಳೊಂದಿಗೆ ಸಂಪರ್ಕ ಸಾಧಿಸಿ, ಅವರ ಸೇವೆ ಮತ್ತು ಕೊಡುಗೆಯನ್ನು ಗುರುತಿಸುವ ಉದ್ದೇಶ ಹೊಂದಲಾಗಿದೆ. ಅದರ ಭಾಗವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಿರುವುದು ಅವರ ಸೇವೆಗೆ ಗೌರವ ಸಲ್ಲಿಸುವ ಸಾರ್ಥಕ ಕಾರ್ಯವಾಗಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಶಾಸಕರಾದ ಅಪ್ಪು ಪಟ್ಟಣಶೆಟ್ಟಿ, ವಿಜು ಪಾಟೀಲ್, ವಿಭಾಗ ಪ್ರಭಾರಿಗಳಾದ ಅರುಣ್ ಶಹಾಪುರ ಹಾಗೂ ಬಸವರಾಜ, ವಿಜಯಪುರ ಮಹಾನಗರ ಪಾಲಿಕೆಯ ಉಪಮಹಾಪೌರಾದ ಸುಮಿತ್ರಾ ಜಾಧವ್, ಮಂಡಲ ಅಧ್ಯಕ್ಷ ಸಂದೀಪ್ ಪಾಟೀಲ್, ಪ್ರಮುಖರಾದ ಉಮೇಶ್ ಕಾರಜೋಳ, ಸುರೇಶ ಬಿರಾದಾರ್, ಚಂದ್ರಶೇಖರ ಕವಟಗಿ ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರು, ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕುರಿತು ಮಾಧ್ಯಮ ಸಲಹೆಗಾರ ವಿಜಯ ಜೋಶಿ ಮಾಹಿತಿ ನೀಡಿದರು.
ಸ್ವಚ್ಛತೆಗಾಗಿ ಪ್ರತಿದಿನ ದುಡಿಯುವ ಪೌರಕಾರ್ಮಿಕರ ಸೇವೆಯನ್ನು ಗುರುತಿಸಿ ಗೌರವಿಸುವ ಮೂಲಕ ‘ಸ್ವಚ್ಛ ಭಾರತ’ದ ಆಶಯವನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande