ಡೀಸೆಲ್ ಕೊರತೆ; ಗ್ರಾಮೀಣ ಬಸ್ ಸಂಚಾರಕ್ಕೆ ಅಡಚಣೆ
ವಿಜಯಪುರ, 09 ಅಕ್ಟೋಬರ್ (ಹಿ.ಸ.) ಸ್ಥಳೀಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಉಂಟಾಗಿರುವ ಡೀಸೆಲ್ ಕೊರತೆ ಹಾಗೂ ಹಲವು ಗ್ರಾಮೀಣ ರಸ್ತೆಗಳ ದುಸ್ಥಿತಿಯಿಂದಾಗಿ ಬಸ್ಗಳ ಟ್ರಿಪ್ಗಳನ್ನು ಕಡಿತಗೊಳಿಸಿರುವ ಪರಿಣಾಮ ಗ್ರಾಮೀಣ ಭಾಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರಿಂದ ನಿತ್ಯ ಕೆಲಸಕ್ಕೆ ತೆರ
ಡೀಸೆಲ್ ಕೊರತೆ ಬಸ್ bandha


ವಿಜಯಪುರ, 09 ಅಕ್ಟೋಬರ್ (ಹಿ.ಸ.)

ಸ್ಥಳೀಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಉಂಟಾಗಿರುವ ಡೀಸೆಲ್ ಕೊರತೆ ಹಾಗೂ ಹಲವು ಗ್ರಾಮೀಣ ರಸ್ತೆಗಳ ದುಸ್ಥಿತಿಯಿಂದಾಗಿ ಬಸ್ಗಳ ಟ್ರಿಪ್ಗಳನ್ನು ಕಡಿತಗೊಳಿಸಿರುವ ಪರಿಣಾಮ ಗ್ರಾಮೀಣ ಭಾಗದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರಿಂದ ನಿತ್ಯ ಕೆಲಸಕ್ಕೆ ತೆರಳುವ ಕಾರ್ಮಿಕರು, ಉದ್ಯೋಗಿಗಳು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಡಿಪೋದಲ್ಲಿ ಇಂಧನದ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಗ್ರಾಮೀಣ ಮಾರ್ಗಗಳ ಬಸ್ಗಳ ಸಂಚಾರವನ್ನು ಕಡಿತಗೊಳಿಸಲಾಗಿದೆ. ನಿಗದಿತ ಸಮಯಕ್ಕೆ ಬಸ್ಗಳು ಬಾರದ ಕಾರಣ ಗ್ರಾಮಸ್ಥರು ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಸಮಸ್ಯೆ ಎದುರಾಗಿದೆ.

ಉಮರಾಣಿ, ದಸೂರ, ಅಗರಖೇಡ, ದೇವರಹಿಪ್ಪರಗಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಚರಿಸುತ್ತಿದ್ದ ಬಸ್ಗಳ ಟ್ರಿಪ್ಗಳಲ್ಲಿ ಕಡಿತ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಾರಿಗೆಯೇ ಪ್ರಮುಖ ಅವಲಂಬನೆಯಾಗಿರುವುದರಿಂದ ಬಸ್ಗಳ ಸಂಖ್ಯೆ ಕಡಿಮೆಯಾಗಿರುವುದು ಜನಜೀವನದ ಮೇಲೆ ನೇರ ಪರಿಣಾಮ ಬೀರಿದೆ.

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿದ್ದರೂ, ಬಸ್ಗಳೇ ಸಮಯಕ್ಕೆ ಲಭ್ಯವಾಗದಿರುವುದರಿಂದ ಅನಿವಾರ್ಯವಾಗಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇದರಿಂದ ಪ್ರಯಾಣಿಕರು ಹೆಚ್ಚುವರಿ ಹಣ ಖರ್ಚು ಮಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗೂ ತೊಂದರೆ

ಬಸ್ಗಳ ಟ್ರಿಪ್ ಕಡಿತದಿಂದ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ತೀವ್ರ ತೊಂದರೆಯಾಗಿದೆ. ಬೆಳಗಿನ ತರಗತಿಗಳಿಗೆ ತೆರಳಲು ಹಾಗೂ ಸಂಜೆ ಮನೆಗೆ ಮರಳಲು ಸೂಕ್ತ ಸಮಯಕ್ಕೆ ಬಸ್ ಸಿಗದೆ ಹಲವು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೆಲವರು ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ರಸ್ತೆ ದುಸ್ಥಿತಿಯೂ ಪ್ರಮುಖ ಕಾರಣ

ಇದೇ ವೇಳೆ, ಕೆಲವು ಗ್ರಾಮೀಣ ಮಾರ್ಗಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಬಸ್ ಸಂಚಾರವನ್ನು ಕಡಿತಗೊಳಿಸಿರುವುದಾಗಿ ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಅಗರಖೇಡ ರಸ್ತೆ ಅತ್ಯಂತ ಹದಗೆಟ್ಟಿದ್ದು, ಕೇವಲ ಎರಡು ದಿನಗಳಲ್ಲಿ ನಾಲ್ಕು ಬಸ್ಗಳ ಟೈರ್ಗಳು ಹಾನಿಗೊಳಗಾಗಿವೆ. ಇಂತಹ ರಸ್ತೆಗಳಲ್ಲಿ ಬಸ್ಗಳನ್ನು ನಿರಂತರವಾಗಿ ಓಡಿಸುವುದರಿಂದ ವಾಹನಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆ ಮಾರ್ಗದ ಕೆಲವು ಟ್ರಿಪ್ಗಳನ್ನು ಕಡಿತಗೊಳಿಸಲಾಗಿದೆ ಎಂದು ಡಿಪೋ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ.

ಎರಡು ದಿನಗಳಲ್ಲಿ ಡೀಸೆಲ್ ಸಮಸ್ಯೆ ಪರಿಹಾರ:

ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಅಮೀನಪ್ಪ ಭೋವಿ, “ಹಲವೆಡೆ ರಸ್ತೆಗಳು ಸರಿ ಇಲ್ಲದ ಕಾರಣ ಬಸ್ ಸಂಚಾರವನ್ನು ಕಡಿತಗೊಳಿಸಲಾಗಿದೆ. ಅಗರಖೇಡ ರಸ್ತೆಯ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಎರಡು ದಿನಗಳಲ್ಲಿ ನಾಲ್ಕು ಟೈರ್ಗಳು ಒಡೆದು ಹೋಗಿವೆ. ಹೀಗಾಗಿ ಆ ಭಾಗದ ಬಸ್ಗಳ ಟ್ರಿಪ್ಗಳನ್ನು ಕಡಿಮೆ ಮಾಡಲಾಗಿದೆ. ಇದರ ಜೊತೆಗೆ ಡೀಸೆಲ್ ಸಮಸ್ಯೆಯೂ ಎದುರಾಗಿದೆ. ಇನ್ನೆರಡು ದಿನಗಳಲ್ಲಿ ಡೀಸೆಲ್ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಿದೆ” ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರ ಆಕ್ರೋಶ

ಬಸ್ ಸಂಚಾರ ಕಡಿತದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ ಡೋಮನಾಳ, “ತಾಂತ್ರಿಕ ದೋಷದ ನೆಪವೊಡ್ಡಿ ಬಸ್ಗಳನ್ನು ಓಡಿಸದೆ ಗ್ರಾಮೀಣ ಭಾಗದ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಬಸ್ ಡಿಪೋಗಳಲ್ಲಿ ಡೀಸೆಲ್ ಶೇಖರಣೆ ಮಾಡಿಕೊಳ್ಳಲು ಸಹ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಗ್ರಾಮೀಣ ಭಾಗದ ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಎಲ್ಲಾ ಟ್ರಿಪ್ಗಳನ್ನು ಮರುಸ್ಥಾಪಿಸಲು ಆಗ್ರಹ

ಗ್ರಾಮೀಣ ಭಾಗದ ಜನರಿಗೆ ಸಾರಿಗೆ ಸಂಪರ್ಕ ಅತ್ಯಗತ್ಯವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ, ಕಡಿತಗೊಳಿಸಿರುವ ಬಸ್ ಟ್ರಿಪ್ಗಳನ್ನು ಪುನಃ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹದಗೆಟ್ಟಿರುವ ಗ್ರಾಮೀಣ ರಸ್ತೆಗಳ ದುರಸ್ತಿಗೂ ಸಂಬಂಧಿಸಿದ ಇಲಾಖೆಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇಂಧನ ಕೊರತೆ, ರಸ್ತೆ ದುಸ್ಥಿತಿ ಹಾಗೂ ತಾಂತ್ರಿಕ ಸಮಸ್ಯೆಗಳ ಕಾರಣಕ್ಕೆ ಪದೇಪದೇ ಬಸ್ ಸಂಚಾರಕ್ಕೆ ವ್ಯತ್ಯಯ ಉಂಟಾದರೆ ಗ್ರಾಮೀಣ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದ್ದರಿಂದ ಕೆಎಸ್ಆರ್ಟಿಸಿ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಗದಿತ ವೇಳಾಪಟ್ಟಿಯಂತೆ ಬಸ್ಗಳನ್ನು ಓಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande