ಬೆಂಗಳೂರಿನಲ್ಲಿ ಹೆಚ್ಚಿದ ರಸ್ತೆ ಗುಂಡಿಗಳು:ಸಚಿವ ಕೃಷ್ಣ ಬೈರೇಗೌಡ ವಿರುದ್ದ ಅಶೋಕ ವಾಗ್ದಾಳಿ
ಬೆಂಗಳೂರು, 07 ಅಕ್ಟೋಬರ್ (ಹಿ.ಸ.): ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ‘ನಿಮ್ಮದೇ ಬ್ಯಾಟರಾಯನಪುರ ವಿಭಾಗ
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 07 ಅಕ್ಟೋಬರ್ (ಹಿ.ಸ.):

ಬೆಂಗಳೂರಿನ ರಸ್ತೆ ಗುಂಡಿಗಳ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

‘ನಿಮ್ಮದೇ ಬ್ಯಾಟರಾಯನಪುರ ವಿಭಾಗದಲ್ಲಿ 824 ಕಿ.ಮೀ. ರಸ್ತೆಗಳನ್ನು ಕೃತಕ ಬುದ್ಧಿಮತ್ತೆ ಆಧಾರಿತವಾಗಿ ಸಮೀಕ್ಷೆ ನಡೆಸಿದಾಗ ಬರೋಬ್ಬರಿ 5,964 ರಸ್ತೆ ಗುಂಡಿಗಳು ಪತ್ತೆಯಾಗಿವೆ. ಇದು ಒಂದು ವಿಭಾಗದ ಲೆಕ್ಕ ಮಾತ್ರ’ ಎಂದು ಅಶೋಕ ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಆಧಾರಿತ ಸಮೀಕ್ಷೆಯಲ್ಲಿ ಬ್ಯಾಟರಾಯನಪುರ ವ್ಯಾಪ್ತಿಯ 823.5 ಕಿ.ಮೀ. ರಸ್ತೆಗಳಲ್ಲಿ 5,964 ಗುಂಡಿಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ.

‘ಒಂದೆಡೆ ವಿಶ್ವಮಟ್ಟದ ಬೆಂಗಳೂರು ಎಂದು ಪ್ರಚಾರ, ಮತ್ತೊಂದೆಡೆ ರಾಜಧಾನಿಯ ರಸ್ತೆಗಳ ಸ್ಥಿತಿ ಅಯೋಮಯ-ಗುಂಡಿಮಯ. ಪಾರ್ಕಿಂಗ್ ಶುಲ್ಕ ವಿಧಿಸುವುದರಲ್ಲಿ ಆಸಕ್ತಿ, ಒತ್ತುವರಿ ತೆರವುಗೊಳಿಸಿದ್ದೇವೆ ಎಂಬ ಪ್ರಚಾರ, ಆದರೆ ಜನರು ಪ್ರತಿನಿತ್ಯ ಬಳಸುವ ರಸ್ತೆಗಳನ್ನು ಸುರಕ್ಷಿತವಾಗಿಡುವಲ್ಲಿ ಇಷ್ಟೊಂದು ನಿರ್ಲಕ್ಷ್ಯ ಏಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರತಿದಿನ ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಈ ಗುಂಡಿಗಳ ನಡುವೆ ಸಂಚರಿಸಬೇಕಾಗಿದೆ. ಮಳೆ ಬಂದಾಗ ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅಶೋಕ ಆರೋಪಿಸಿದ್ದಾರೆ.

‘ನಿಮ್ಮದೇ ಕ್ಷೇತ್ರದಲ್ಲಿ ಸುಮಾರು 6 ಸಾವಿರ ಗುಂಡಿಗಳಿವೆ. ಇನ್ನು ಬೆಂಗಳೂರಿನ ನಗರದ ರಸ್ತೆಗಳಲ್ಲಿರುವ ಸಾವಿರಾರು ಗುಂಡಿಗಳ ನಿರ್ವಹಣೆಯ ಹೊಣೆಗಾರಿಕೆ ಯಾರದ್ದು?’ ಎಂದು ಕೃಷ್ಣ ಬೈರೇಗೌಡ ಅವರನ್ನು ಪ್ರಶ್ನಿಸಿರುವ ಅವರು, ರಾಜಧಾನಿಯ ಜನರಿಗೆ ಭಾಷಣ, ಪ್ರಚಾರ ಮತ್ತು ಹೊಸ ಶುಲ್ಕಗಳ ಬದಲು ಗುಂಡಿ ಮುಕ್ತ ರಸ್ತೆ, ಸುರಕ್ಷಿತ ಸಂಚಾರ ಮತ್ತು ಸಮರ್ಪಕ ನಗರ ನಿರ್ವಹಣೆ ಬೇಕಾಗಿದೆ ಎಂದು ಹೇಳಿದ್ದಾರೆ.

‘ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಬ್ರಾಂಡ್ ಬೆಂಗಳೂರು ಎಂದರೆ ಏನೆಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ. ಉತ್ತರಿಸಿ’ ಎಂದು ಅಶೋಕ ಆಗ್ರಹಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande