ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆಗೆ ಆರ್. ಅಶೋಕ್ ವಿರೋಧ
ಬೆಂಗಳೂರು, 07 ಅಕ್ಟೋಬರ್ (ಹಿ.ಸ.): ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ಸರ್ಕಾರ
ಅಶೋಕ ಸಂಗ್ರಹ ಚಿತ್ರ


ಬೆಂಗಳೂರು, 07 ಅಕ್ಟೋಬರ್ (ಹಿ.ಸ.):

ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ.

ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಪೊಲೀಸ್ ಕಮಿಷನರೇಟ್ ಅನ್ನು ಐದು ಭಾಗಗಳಾಗಿ ವಿಭಜಿಸುವ ಸರ್ಕಾರದ ನಿರ್ಧಾರ ತುಘಲಕ್ ಆಡಳಿತಕ್ಕೆ ಮತ್ತೊಂದು ಉದಾಹರಣೆ ಎಂದು ಟೀಕಿಸಿದ್ದಾರೆ. ಹಲವು ವರ್ಷಗಳಿಂದ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಬಲಪಡಿಸುವ ಬದಲು ಐದು ಕಮಿಷನರೇಟ್‌ಗಳಾಗಿ ವಿಭಜಿಸುವ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಭಜಿಸಿದ ಬಳಿಕ ಆಡಳಿತಾತ್ಮಕ ಹಾಗೂ ಹಣಕಾಸಿನ ಸಮಸ್ಯೆಗಳು ಎದುರಾಗಿವೆ ಎಂದು ಅಶೋಕ್ ಆರೋಪಿಸಿದ್ದಾರೆ. ಯಾವುದೇ ಯೋಜನೆ ಕೈಗೊಳ್ಳಲು ಪಾಲಿಕೆಗಳ ಬಳಿ ಹಣವಿಲ್ಲದ ಕಾರಣ ಜನರಿಂದ ಕಸ ಹಾಗೂ ಪಾರ್ಕಿಂಗ್ ಹೆಸರಿನಲ್ಲಿ ದಂಡ ವಸೂಲಿ ಮಾಡುವುದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದಾರೆ.

ಇದೀಗ ಪೊಲೀಸ್ ಇಲಾಖೆಯನ್ನೂ ಇದೇ ರೀತಿಯಲ್ಲಿ ವಿಭಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಶುಲ್ಕಗಳನ್ನು ಜಾರಿಗೆ ತಂದರೂ ಅಚ್ಚರಿಪಡಬೇಕಿಲ್ಲ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿರುವ ಅಶೋಕ್, ಅನೇಕ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗದಿರುವಾಗ ಹೊಸದಾಗಿ 1,022 ಹುದ್ದೆಗಳಿಗೆ ಹಣಕಾಸು ಎಲ್ಲಿಂದ ತರಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ಹೊಸ ಕಚೇರಿಗಳ ನಿರ್ಮಾಣ ಹಾಗೂ ಹೊಸ ಜಾಗಗಳಿಗಾಗಿ ಅನುದಾನ ಎಲ್ಲಿದೆ ಎಂಬುದನ್ನೂ ಅವರು ಕೇಳಿದ್ದಾರೆ.

ಕೇವಲ ಘೋಷಣೆಗಳನ್ನು ಮಾಡಿ ಬಳಿಕ ಅವುಗಳನ್ನು ಜಾರಿಗೊಳಿಸದೆ ಸಬೂಬು ಹೇಳುವ ನಾಟಕ ಮಾಡಬಾರದು. ಪೊಲೀಸ್ ವ್ಯವಸ್ಥೆಯನ್ನು ವಿಭಜಿಸುವ ಬದಲು ಈಗಿರುವ ವ್ಯವಸ್ಥೆಗೆ ಹೆಚ್ಚಿನ ಅನುದಾನ ನೀಡಿ ಬಲಪಡಿಸಬೇಕು ಎಂದು ಅಶೋಕ್ ಒತ್ತಾಯಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande