
ಬೆಂಗಳೂರು, 07 ಅಕ್ಟೋಬರ್ (ಹಿ.ಸ.):
ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ನಡೆಯುತ್ತಿರುವ ಶ್ವೇತಪದರ(ವೈಟ್ ಟ್ಯಾಪಿಂಗ್) ರಸ್ತೆ ಕಾಮಗಾರಿಯನ್ನು ಸಚಿವ ರಿಜ್ವಾನ್ ಅರ್ಷದ್ ತಡರಾತ್ರಿ ಪರಿಶೀಲಿಸಿದರು.
ಪ್ರಮುಖ ರಸ್ತೆಯಾಗಿರುವ ರೇಸ್ ಕೋರ್ಸ್ ರಸ್ತೆಯಲ್ಲಿ ಹೆಚ್ಚಿನ ವಾಹನ ಸಂಚಾರ ಹಾಗೂ ದೈನಂದಿನ ಸಂಚಾರ ಇರುವ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ತೊಂದರೆಯಾಗದಂತೆ ರಾತ್ರಿ ವೇಳೆ ಕಾಮಗಾರಿ ನಡೆಸಲಾಗುತ್ತಿದೆ.
ಪರಿಶೀಲನೆ ವೇಳೆ ನಡೆಯುತ್ತಿರುವ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಸಚಿವರು ಪರಿಶೀಲಿಸಿದರು. ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪಾಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಅಲ್ಲದೆ, ನಿಗದಿತ ಕಾಲಮಿತಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟ, ಸುರಕ್ಷತೆ ಹಾಗೂ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರ್ಣಗೊಳಿಸುವಿಕೆಗೆ ಆದ್ಯತೆ ನೀಡುವಂತೆ ಸಚಿವರು ಸೂಚಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.