
ಕೋಲಾರ, ೨೮ ಅಕ್ಟೋಬರ್ (ಹಿ.ಸ) ಬಂಗಾರಪೇಟೆ ತಾಲ್ಲೂಕಿನ ನೆರಳೇಕೆರೆ ಗ್ರಾಮದಲ್ಲಿ ಮನೆಯ ಕುಡಿಯುವ ನೀರಿನ ಟ್ಯಾಂಕ್ಗೆ ವಿಷವನ್ನು ಬೆರೆಸಿರುವ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ನಾರಾಯಣಪ್ಪ ಮಾತನಾಡಿ ತಮ್ಮ ಮನೆಯ ನೀರಿನ ಟ್ಯಾಂಕ್ ನಲ್ಲಿ ವಿಷವನ್ನು ಬೆರೆಸಿರುವ ಶಂಕೆ ಮೂಡಿದೆ. ನಿನ್ನೆ ರಾತ್ರಿ ಮನೆಯ ಗೇಟ್ ಹಾಕಿಕೊಂಡು ಕುಟುಂಬದವರೆಲ್ಲರೂ ಮಲಗಿದ್ದು, ಬೆಳಿಗ್ಗೆ ಎದ್ದು ಸ್ನಾನಗೃಹದಲ್ಲಿ ಮುಖ ತೊಳೆಯಲು ಹೋದಾಗ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯ ಮೇಲಿದ್ದ ನೀರಿನ ಟ್ಯಾಂಕ್ ಪರಿಶೀಲಿಸಿದಾಗ ಅನುಮಾನಾಸ್ಪದ ಅಂಶಗಳು ಕಂಡುಬಂದವು ಎಂದು ಅವರು ಹೇಳಿದ್ದಾರೆ.
ತಕ್ಷಣ ಮನೆಯವರಿಗೆ ನೀರನ್ನು ಬಳಸದಂತೆ ಎಚ್ಚರಿಕೆ ನೀಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ವಿಷಯ ತಿಳಿದ ಪೊಲೀಸ್ ನಿರೀಕ್ಷಕ ಸಿ.ರವಿಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರಿನ ಮಾದರಿಯನ್ನು ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.
ನಾರಾಯಣಪ್ಪ ಅವರು ಮತ್ತು ತಮ್ಮ ಸಹೋದರ ಅಮರೇಶ್ ನಡುವೆ ಈ ಹಿಂದೆ ವೈಮನಸ್ಸು ಹಾಗೂ ಜಗಳಗಳು ನಡೆಯುತ್ತಿದ್ದವು ಎಂದು ಹೇಳಿಕೊಂಡಿದ್ದಾರೆ. ಆದರೆ, ನೀರಿನ ಟ್ಯಾಂಕ್ ಗೆ ವಿಷಕಾರಿ ವಸ್ತು ಬೆರೆಸಿದವರು ಯಾರು, ಇದರ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ದೃಢಪಟ್ಟಿಲ್ಲ.
ನೀರಿನ ಮಾದರಿಯ ಪರೀಕ್ಷಾ ವರದಿ ಹಾಗೂ ಪೊಲೀಸ್ ತನಿಖೆಯ ನಂತರವೇ ಘಟನೆಯ ನೈಜ ಸಂಗತಿ ತಿಳಿದುಬರಬೇಕಿದೆ. ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ನಾರಾಯಣಪ್ಪ ಅವರು ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್