ಡಿಸಿಸಿ ಬ್ಯಾಂಕ್ ಅಕ್ರಮಗಳ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಿಸಲು ರೈತ ಸಂಘ ಒತ್ತಾಯ
ಡಿಸಿಸಿ ಬ್ಯಾಂಕ್ ಅಕ್ರಮಗಳ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ನೇಮಿಸಲು ರೈತ ಸಂಘ ಒತ್ತಾಯ
ಡಿಸಿಸಿ ಬ್ಯಾಂಕ್ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿ ರೈತ ಸಂಘದಿAದ ಕೋಲಾರ ಡಿಸಿಸಿ ಬ್ಯಾಂಕ್ ಕೇಂದ್ರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.


ಕೋಲಾರ, ೨೮ ಅಕ್ಟೋಬರ್ (ಹಿ.ಸ.) : ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಪಾಯಿಗಳ ಹಣಕಾಸು ಅಕ್ರಮಗಳು ಹಾಗೂ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ವಿರುದ್ಧ ಕೇಳಿಬಂದಿರುವ ಲಂಚದ ಆರೋಪದ ವಿಡಿಯೋ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿತು.

ನಗರದ ಡಿಸಿಸಿ ಬ್ಯಾಂಕ್ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದ ರೈತ ಸಂಘದ ಕಾರ್ಯಕರ್ತರು, ಬ್ಯಾಂಕ್ ಅಧಿಕಾರಿಗಳ ಮೂಲಕ ಅಧ್ಯಕ್ಷ ಕೊತ್ತೂರು ಮಂಜುನಾಥ್ ರವರಿಗೆೆ ಮನವಿ ಸಲ್ಲಿಸಿದರು.

ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿಗೌಡ ಮಾತನಾಡಿ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಡಿಸಿಸಿ ಬ್ಯಾಂಕ್ನ ಸಾಲ ವಿತರಣೆ ಯಾವಾಗ ಪುನರಾರಂಭವಾಗಲಿದೆ ಎಂಬುದಕ್ಕೆ ನೂತನ ಅಧ್ಯಕ್ಷರು ಉತ್ತರ ನೀಡಬೇಕು. ಖಾಸಗಿ ಸಾಲಗಳಿಂದ ಮುಕ್ತರಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ನ ಸಾಲ ಸೌಲಭ್ಯವನ್ನು ಅವಲಂಬಿಸಿರುವ ಗ್ರಾಮೀಣ ರೈತರು, ಕೂಲಿಕಾರ್ಮಿಕರು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ವಿತರಣೆ ಸ್ಥಗಿತಗೊಂಡಿರುವುದರಿAದ ತೊಂದರೆಯಾಗಿದೆ. ಬ್ಯಾಂಕ್ನಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಹಾಗೂ ಹಿಂದಿನ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ ಎಂದು ಪ್ರಶ್ನಿಸಿದರು.

ಲಕ್ಷಾಂತರ ರೈತರು, ಕೂಲಿಕಾರ್ಮಿಕರು ಹಾಗೂ ಮಹಿಳೆಯರ ಸ್ವಾಭಿಮಾನದ ಬದುಕಿಗೆ ನೆರವಾಗಿರುವ ಡಿಸಿಸಿ ಬ್ಯಾಂಕ್ ಅನ್ನು ಉಳಿಸಲು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು. ವ್ಯವಸ್ಥಾಪಕ ನಿರ್ದೇಶಕರ ನೇಮಕ ವಿಚಾರದಲ್ಲಿ ಜಿಲ್ಲೆಯ ಎರಡು ಗುಂಪುಗಳ ನಡುವೆ ಹೊಂದಾಣಿಕೆ ಇಲ್ಲದಿರುವುದು ಹಾಗೂ ಪ್ರತಿಷ್ಠೆಯ ರಾಜಕಾರಣದಿಂದ ಬ್ಯಾಂಕ್ನ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬ ಅನುಮಾನ ಮೂಡಿದೆ ಎಂದು ಆರೋಪಿಸಿದರು..

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ, ರೈತರ ಸಾಲ ನವೀಕರಣಕ್ಕಾಗಿ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ಹಣ ಕೇಳಿದ್ದಾರೆ ಎಂಬ ಆರೋಪದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕರಣದ ಬಗ್ಗೆ ಬ್ಯಾಂಕ್ ಅಧ್ಯಕ್ಷರು ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.

ಬ್ಯಾಂಕ್ ಎಂ.ಡಿ ವೆಂಕಟೇಶ್ ಅವರನ್ನು ಪ್ರಾಮಾಣಿಕ ಮತ್ತು ನಿಷ್ಠಾವಂತ ಅಧಿಕಾರಿ ಎಂದು ಪರಿಗಣಿಸಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ನೇಮಕದ ವಿಚಾರವಾಗಿ ಪರ–ವಿರೋಧ ಚರ್ಚೆಗಳು ನಡೆದ ಬಳಿಕ ಲಂಚದ ಆರೋಪದ ವಿಡಿಯೊ ಬಹಿರಂಗವಾಗಿದೆ. ಈ ಆರೋಪದ ಸತ್ಯಾಸತ್ಯತೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಸತ್ಯಾಂಶವನ್ನು ಸಾರ್ವಜನಿಕರ ಮುಂದೆ ತರಬೇಕು. ಬ್ಯಾಂಕ್ನ ಹಿತದೃಷ್ಟಿಯಿಂದ ಅಧ್ಯಕ್ಷರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಹಿಂದಿನ ಅವಧಿಯಲ್ಲಿ ಪ್ರಭಾವಿಗಳು ಹಾಗೂ ಅಧಿಕಾರಿಗಳು ನಕಲಿ ಸ್ತ್ರೀಶಕ್ತಿ ಸಂಘಗಳನ್ನು ಸೃಷ್ಟಿಸಿ ಸುಮಾರು ₹೫೦೦ ಕೋಟಿ ಬ್ಯಾಂಕ್ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ವಿಧಾನ ಪರಿಷತ್ ಸದಸ್ಯ ಅನಿಲ್ಕುಮಾರ್ ಈ ಹಿಂದೆ ಪ್ರಸ್ತಾಪಿಸಿದ್ದರು. ಈ ಆರೋಪವೂ ಸೇರಿದಂತೆ ಬ್ಯಾಂಕ್ನಲ್ಲಿನ ಹಣಕಾಸು ವ್ಯವಹಾರಗಳು ಮತ್ತು ರೈತರ ಸಾಲ ನವೀಕರಣಕ್ಕೆ ಸಂಬಂಧಿಸಿದ ಲಂಚದ ಆರೋಪದ ಕುರಿತು ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಹನುಮಯ್ಯ ಆಗ್ರಹಿಸಿದರು.

ಬ್ಯಾಂಕ್ನ ಹಣಕಾಸು ವ್ಯವಹಾರಗಳ ಪರಿಶೀಲನೆ ನಡೆಸಿ, ಅಕ್ರಮಗಳು ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ರೈತರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಗೆ ಮತ್ತೆ ಸಾಲ ಸೌಲಭ್ಯ ದೊರೆಯುವಂತೆ ಕ್ರಮ ಕೈಗೊಂಡು ಬ್ಯಾಂಕ್ನ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬ್ಯಾಂಕ್ ಅಧಿಕಾರಿಗಳು ರೈತರು, ಕೂಲಿಕಾರ್ಮಿಕರು ಹಾಗೂ ಮಹಿಳೆಯರ ನ್ಯಾಯಯುತ ಬೇಡಿಕೆಗಳನ್ನು ಬ್ಯಾಂಕ್ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ, ಕಮ್ಮದಟ್ಟಿ ಚಲಪತಿ, ಮಂಜುನಾಥ್, ಚಂದ್ರಪ್ಪ, ಯಾರಂಘಟ್ಟ ಗಿರೀಶ್, ರಾಜು, ನಾಗರಾಜ್, ಆಂಜಿನಪ್ಪ, ವೀರಭದ್ರಪ್ಪ, ತಿಮ್ಮಣ್ಣ, ಶೈಲಜ, ರತ್ನಮ್ಮ, ಶೋಭಾ, ಚೌಡಮ್ಮ, ರಾಧಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande