
ಬೆಂಗಳೂರು, 27 ಅಕ್ಟೋಬರ್ (ಹಿ.ಸ.):
ರಾಜ್ಯ ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿನ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಕಬ್ಬು ಬೆಳೆಗಾರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಹಾಗೂ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಎಂದು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಮುಖ್ಯಮಂತ್ರಿ ಅಸಹಾಯಕತೆ ವ್ಯಕ್ತಪಡಿಸಿರುವುದು ಖಂಡನೀಯ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದೆ, ರೈತಪರ ಯೋಜನೆಗಳಿಗೆ ಅನುದಾನ ನೀಡಲಾಗದೆ ಸರ್ಕಾರದ ಖಜಾನೆ ಬರಿದಾಗಿದೆ. ರೈತರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯವಾಗದ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ತಲುಪಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ನ ಪ್ರಚಾರ ಬರೀ ಸುಳ್ಳು. ಜನರ ಹಣದಲ್ಲಿ ಜಾಹೀರಾತು ನೀಡಿರುವುದನ್ನು ಬಿಟ್ಟರೆ ಸರ್ಕಾರದ ಸಾಧನೆ ಏನೂ ಇಲ್ಲ ಎಂದು ಟೀಕಿಸಿದ್ದಾರೆ.
ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಪರಿಹಾರವಲ್ಲ. ರೈತರಿಗೆ ನೆರವು ನೀಡಲಾಗದ ರಾಜ್ಯ ಸರ್ಕಾರ ಇದ್ದರೇನು, ಇಲ್ಲದಿದ್ದರೇನು ಎಂದು ಪ್ರಶ್ನಿಸಿರುವ ಅವರು, ರೈತರ ಬೆವರಿಗೂ ಬೆಲೆ ನೀಡಲಾಗದ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದರಿಂದ ರಾಜ್ಯ ಸರ್ಕಾರದ ನೈಜ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ರೈತರಿಗೆ ಮಾಹಿತಿ ದೊರೆಯಲಿದೆ. ಭರವಸೆ ನೀಡುವುದು ಮತ್ತು ಅದನ್ನು ಈಡೇರಿಸುವುದರ ನಡುವಿನ ವ್ಯತ್ಯಾಸವೂ ಜನರಿಗೆ ಸ್ಪಷ್ಟವಾಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.