ಖರ್ಗೆ ಹೇಳಿಕೆಯನ್ನು ತಿರುಚಿ ಕ್ಷುಲ್ಲಕ ರಾಜಕಾರಣ: ಬಿಜೆಪಿ, ಜೆಡಿಎಸ್ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ
ಬೆಂಗಳೂರು, 27 ಅಕ್ಟೋಬರ್ (ಹಿ.ಸ.): ಸತ್ಯವನ್ನು ತಿರುಚುವುದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸುಳ್ಳಿನ ಮೂಲಕ ರಾಜಕಾರಣ ಮಾಡುತ್ತಿರುವ ಎರಡೂ ಪಕ್ಷಗಳ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸಲು ಹೊರಟಿದ್ದಾ
ದಿನೇಶ್ ಗುಂಡೂರಾವ್ ಫೈಲ್ ಪೋಟೋ


ಬೆಂಗಳೂರು, 27 ಅಕ್ಟೋಬರ್ (ಹಿ.ಸ.):

ಸತ್ಯವನ್ನು ತಿರುಚುವುದರಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸುಳ್ಳಿನ ಮೂಲಕ ರಾಜಕಾರಣ ಮಾಡುತ್ತಿರುವ ಎರಡೂ ಪಕ್ಷಗಳ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತಿರುಚಿ ವಿವಾದ ಸೃಷ್ಟಿಸಲು ಹೊರಟಿದ್ದಾರೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ತಂದೆಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಖರ್ಗೆ ಅವರು ಯಾವ ಸಂದರ್ಭದಲ್ಲಿ ಮೋದಿಯವರ ತಂದೆಯನ್ನು ಅವಮಾನಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಸಭಿಕರೊಬ್ಬರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ. ಮೋದಿಯವರಷ್ಟೇ ಅಲ್ಲ, ಅವರಿಗಿಂತ ದೊಡ್ಡವರೂ ಒಂದಲ್ಲ ಒಂದು ದಿನ ಅಧಿಕಾರದಿಂದ ನಿರ್ಗಮಿಸಲೇಬೇಕು ಎಂಬ ಅರ್ಥದಲ್ಲಿ ಖರ್ಗೆ ಮಾತನಾಡಿದ್ದಾರೆ. ಇದರಲ್ಲಿ ಮೋದಿಯವರ ತಂದೆಯವರನ್ನು ನಿಂದಿಸಿರುವ ಅಂಶ ಎಲ್ಲಿದೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಸಂಸ್ಕಾರ ಮತ್ತು ಸಭ್ಯತೆಯ ಬಗ್ಗೆ ಪಾಠ ಮಾಡುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಸೋನಿಯಾ ಗಾಂಧಿ ಅವರ ಬಗ್ಗೆ ಬಳಸಿದ್ದ ಭಾಷೆಯನ್ನು ನೆನಪಿಸಿಕೊಳ್ಳಲಿ. ಸೋನಿಯಾ ಗಾಂಧಿ ಮಹಿಳೆ ಎಂಬುದನ್ನೂ ಗಮನಿಸದೆ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದಾಗ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಏಕೆ ಮೌನವಾಗಿದ್ದರು? ಆಗ ಮೋದಿಯವರ ಮಾತುಗಳನ್ನು ಏಕೆ ಖಂಡಿಸಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಹೇಗೆ ಮಾತನಾಡಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾರೂ ಕಲಿಸಬೇಕಿಲ್ಲ. ಅವರ ಸುದೀರ್ಘ ರಾಜಕೀಯ ಜೀವನದ ತಳಹದಿಯೇ ಸಾರ್ವಜನಿಕ ಸಭ್ಯತೆ ಮತ್ತು ಘನತೆಯ ನಡವಳಿಕೆಯಾಗಿದೆ ಎಂಬುದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande