
ಬೆಂಗಳೂರು, 27 ಅಕ್ಟೋಬರ್ (ಹಿ.ಸ.):
ತಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಸಂಘ ಕಲಿಸಿಕೊಟ್ಟ ಸಂಸ್ಕಾರ, ರಾಷ್ಟ್ರಪ್ರೇಮ ಮತ್ತು ವೈಚಾರಿಕತೆ ತನ್ನ ವ್ಯಕ್ತಿತ್ವದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು, ಅಧಿಕಾರ ಪಡೆಯಲು ಅಥವಾ ಸ್ಥಾನಮಾನ ಗಿಟ್ಟಿಸಿಕೊಳ್ಳಲು ಒಂದು ಕುಟುಂಬವನ್ನು ಆಜೀವ ಪರ್ಯಂತ ಓಲೈಸುವ ಅನಿವಾರ್ಯತೆ ತನಗಿಲ್ಲ ಎಂದು ಟೀಕಿಸಿದ್ದಾರೆ.
ತನ್ನ ಮಕ್ಕಳಿಗೆ ಮತ್ತೊಂದು ಕುಟುಂಬದ ಮಕ್ಕಳ ಹೆಸರನ್ನಿಟ್ಟು ಆ ಕುಟುಂಬದ ಮೇಲಿನ ನಿಷ್ಠೆಯನ್ನು ಸಾಬೀತುಪಡಿಸಿಕೊಳ್ಳುವ ಮುಲಾಜೂ ತನಗಿಲ್ಲ ಎಂದು ಹೇಳಿರುವ ಅಶೋಕ, ಸಂಘದ ಮೇಲಿನ ಅಭಿಮಾನ ತನ್ನ ವೈಚಾರಿಕ ಬದ್ಧತೆಯಾಗಿದೆ. ಅದು ಅಧಿಕಾರಕ್ಕಾಗಿ ಮಾಡಿಕೊಂಡ ರಾಜಿಯಾಗಲಿ ಅಥವಾ ವ್ಯಕ್ತಿಪೂಜೆಯ ಪ್ರದರ್ಶನವಾಗಲಿ ಅಲ್ಲ ಎಂದು ತಿಳಿಸಿದ್ದಾರೆ.
ಈ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪ್ರಬುದ್ಧತೆ, ಮುತ್ಸದ್ದಿತನ ಮತ್ತು ಸ್ವಂತ ವ್ಯಕ್ತಿತ್ವ ಅಗತ್ಯ. ಆದರೆ, ಪ್ರಿಯಾಂಕ್ ಖರ್ಗೆಯಂತಹವರಿಂದ ಇಂತಹ ಗುಣಗಳನ್ನು ನಿರೀಕ್ಷಿಸುವುದೇ ಅಸಾಧ್ಯ ಎಂದು ಅಶೋಕ ವ್ಯಂಗ್ಯವಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.