
ವಾರಣಾಸಿ, 25 ಅಕ್ಟೋಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಾಣಸಿಯ ಮಿರ್ಜಾಮುರಾದ್ನ ಖೋಚ್ವಾ ಪ್ರದೇಶದಲ್ಲಿ ಅರವಿಂದ್ ಲಿಮಿಟೆಡ್ನ ನೂತನ ಉಡುಪು ತಯಾರಿಕಾ ಘಟಕವನ್ನು ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಘಟಕವನ್ನು ಪರಿಶೀಲಿಸಿದ ಅವರು, ತರಬೇತಿ ಪಡೆದಿರುವ ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರೊಂದಿಗೆ ನೇರ ಸಂವಾದ ನಡೆಸಿ, ಅವರ ಅನುಭವಗಳನ್ನು ಆಲಿಸಿದರು.
ಇದಕ್ಕೂ ಮುನ್ನ ವಿಶೇಷ ಹೆಲಿಕಾಪ್ಟರ್ ಮೂಲಕ ಖೋಚ್ವಾಗೆ ಆಗಮಿಸಿದ ಪ್ರಧಾನಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತರ ಗಣ್ಯರು ಹಾಗೂ ಅರವಿಂದ್ ಲಿಮಿಟೆಡ್ನ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ಪ್ರಧಾನಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ, ಅಲ್ಲಿನ ಉತ್ಪಾದನಾ ಸೌಲಭ್ಯಗಳು ಮತ್ತು ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದರು.
ಈ ಕೈಗಾರಿಕಾ ಘಟಕವನ್ನು ಸುಮಾರು ೧೦೦ರಿಂದ ೧೫೦ ಕೋಟಿ ರೂ. ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ. ಇಲ್ಲಿ ಕ್ರೀಡಾ ಉಡುಪುಗಳು, ಒಳ ಉಡುಪುಗಳು, ಅಂಗಿಗಳು ಮತ್ತು ಟಿ-ಶರ್ಟ್ಗಳು ಸೇರಿದಂತೆ ವಿವಿಧ ಬಗೆಯ ಉಡುಪುಗಳನ್ನು ತಯಾರಿಸಲಾಗುತ್ತದೆ. ಘಟಕದಲ್ಲಿ ಉತ್ಪಾದನೆಯಾಗುವ ಉಡುಪುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಯೋಜನೆಯೂ ಇದೆ.
ಈ ಯೋಜನೆಯಿಂದ ಒಂದು ಸಾವಿರಕ್ಕೂ ಅಧಿಕ ಮಂದಿಗೆ ನೇರ ಉದ್ಯೋಗ ದೊರೆಯುವ ನಿರೀಕ್ಷೆಯಿದೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಉದ್ಯೋಗಕ್ಕೆ ಅಗತ್ಯವಾದ ತರಬೇತಿಯನ್ನೂ ನೀಡಲಾಗುತ್ತಿದೆ.
ಮಹಿಳೆಯರ ಉದ್ಯೋಗಕ್ಕೆ ಆದ್ಯತೆ
ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತರಬೇತಿ ಪಡೆದಿರುವ ಹಾಗೂ ಘಟಕದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ತರಬೇತಿ, ಕೆಲಸದ ಸ್ವರೂಪ ಮತ್ತು ಉದ್ಯೋಗದಿಂದ ದೊರೆಯುತ್ತಿರುವ ಅನುಭವಗಳ ಕುರಿತು ಮಾಹಿತಿ ಪಡೆದುಕೊಂಡರು.
ಸ್ಥಳೀಯ ಮಹಿಳೆಯರಿಗೆ ತಮ್ಮದೇ ಪ್ರದೇಶದಲ್ಲಿ ಉದ್ಯೋಗಾವಕಾಶ ಒದಗಿಸುವ ಮೂಲಕ ಅವರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಉತ್ಪಾದನಾ ಚಟುವಟಿಕೆಗಳ ವಿಸ್ತರಣೆಯೊಂದಿಗೆ ಸ್ಥಳೀಯ ಮಟ್ಟದಲ್ಲಿ ಕೌಶಲಾಭಿವೃದ್ಧಿ ಮತ್ತು ಮಹಿಳಾ ಉದ್ಯೋಗಕ್ಕೆ ಆದ್ಯತೆ ನೀಡಲಾಗಿದೆ. ಈ ಘಟಕವು ಉತ್ತರ ಪ್ರದೇಶದಲ್ಲಿ ಕೈಗಾರಿಕಾ ಹೂಡಿಕೆ ಹಾಗೂ ಉತ್ಪಾದನಾ ವಲಯದ ಚಟುವಟಿಕೆಗಳನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.