ಎರಡು ಪ್ರಮುಖ ಸಂಘರ್ಷಗಳ ಬೆಲೆ ತೆರುತ್ತಿರುವ ಜಗತ್ತು: ಭಾರತದ ಧ್ವನಿ ಜಾಗತಿಕ ಭಾವನೆಯ ಪ್ರತಿಬಿಂಬ; ಜೈಶಂಕರ್
ನವದೆಹಲಿ, 25 ಅಕ್ಟೋಬರ್ (ಹಿ.ಸ.): ಜಗತ್ತು ಇಂದು ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಎರಡು ಪ್ರಮುಖ ಸಂಘರ್ಷಗಳಲ್ಲಿ ಸಿಲುಕಿದ್ದು, ಈ ಸಂಘರ್ಷಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಸಮಾಜಗಳು ಮತ್ತು ಆರ್ಥಿಕ ವ್ಯವಸ್ಥೆಗಳು ಅವುಗಳ ಭಾರೀ ಬೆಲೆಯನ್ನು ತೆರಬೇಕಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹ
Jaishankar


ನವದೆಹಲಿ, 25 ಅಕ್ಟೋಬರ್ (ಹಿ.ಸ.):

ಜಗತ್ತು ಇಂದು ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಎರಡು ಪ್ರಮುಖ ಸಂಘರ್ಷಗಳಲ್ಲಿ ಸಿಲುಕಿದ್ದು, ಈ ಸಂಘರ್ಷಗಳೊಂದಿಗೆ ಯಾವುದೇ ಸಂಬಂಧವಿಲ್ಲದ ಸಮಾಜಗಳು ಮತ್ತು ಆರ್ಥಿಕ ವ್ಯವಸ್ಥೆಗಳು ಅವುಗಳ ಭಾರೀ ಬೆಲೆಯನ್ನು ತೆರಬೇಕಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದ್ದಾರೆ.

ಇಂತಹ ಸಂದರ್ಭದಲ್ಲಿ ಭಾರತವು ಅಸಹಾಯಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ. ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುವ ಮೂಲಕ ಭಾರತವು ಜಾಗತಿಕ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ. ಈ ನಿಟ್ಟಿನಲ್ಲಿ ಇತರ ಪಾಲುದಾರ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸಲು ಭಾರತ ಸಿದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನವನ್ನುದ್ದೇಶಿಸಿ ಭಾನುವಾರ ಮಾತನಾಡಿದ ಜೈಶಂಕರ್, ಸಂಕೀರ್ಣ ಪೂರೈಕೆ ಸರಪಳಿಗಳು, ಜಾಗತೀಕೃತ ಮಾರುಕಟ್ಟೆಗಳು ಮತ್ತು ಹಂಚಿಕೆಯ ಸಂಪನ್ಮೂಲಗಳ ಯುಗದಲ್ಲಿ ಜಗತ್ತು ಅರ್ಧದಷ್ಟು ಸಮೃದ್ಧವಾಗಿದ್ದು, ಉಳಿದ ಅರ್ಧದಷ್ಟು ವಂಚಿತವಾಗಿರುವ ಸ್ಥಿತಿಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇಂತಹ ಅಸಮಾನತೆ ನಿರಂತರ ಅಸ್ಥಿರತೆಗೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಯೋತ್ಪಾದನೆಯು ಶಾಂತಿಗೆ ಮಾರಕ ಬೆದರಿಕೆಯಾಗಿದೆ ಎಂದು ಎಚ್ಚರಿಸಿದ ವಿದೇಶಾಂಗ ಸಚಿವರು, ಕೆಲವು ದೇಶಗಳು ಇಂದಿಗೂ ರಾಜಕೀಯ ಲೆಕ್ಕಾಚಾರಗಳಿಗೆ ಆದ್ಯತೆ ನೀಡುತ್ತಿವೆ ಎಂದು ಹೇಳಿದರು. ಭಯೋತ್ಪಾದನೆಯನ್ನು ರಾಜ್ಯದ ನೀತಿಯ ಅಸ್ತ್ರವಾಗಿ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ. ಅದನ್ನು ಯಾವುದೇ ಕಾರಣಕ್ಕೂ ಸಮರ್ಥಿಸಿಕೊಳ್ಳಲಾಗದು ಎಂದು ಅವರು ಸ್ಪಷ್ಟಪಡಿಸಿದರು.

ಈ ಸಾಮಾನ್ಯ ಬೆದರಿಕೆಯ ಕುರಿತು ಜಗತ್ತು ಹೆಚ್ಚು ಜಾಗೃತವಾಗಬೇಕು. ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ದೃಢ ಸಂಕಲ್ಪದೊಂದಿಗೆ ರಾಷ್ಟ್ರಗಳು ಒಂದಾಗಬೇಕು ಎಂದು ಜೈಶಂಕರ್ ಕರೆ ನೀಡಿದರು.

ವಿಶ್ವಸಂಸ್ಥೆ ದಿನದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮಾನವ ಸಮಾಜದಲ್ಲಿ ಸ್ಪರ್ಧೆ ಮತ್ತು ಸಹಕಾರದ ಕುರಿತು ಸದಾ ಚರ್ಚೆಗಳು ನಡೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಈ ಚರ್ಚೆಗಳು ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿಯೂ ಪ್ರತಿಫಲಿಸುತ್ತವೆ ಎಂದು ಹೇಳಿದರು.

ಎಂಟು ದಶಕಗಳ ಹಿಂದೆ ವಿಶ್ವಸಂಸ್ಥೆಯ ಸ್ಥಾಪನೆಯು ಸಾಮೂಹಿಕ ಸಹಕಾರದ ಮನೋಭಾವವನ್ನು ಅಭಿವ್ಯಕ್ತಿಸಿತ್ತು. ಜಾಗತಿಕ ಸವಾಲುಗಳು ಮತ್ತು ಅವಕಾಶಗಳಿಗೆ ಪರಿಣಾಮಕಾರಿಯಾದ ಪರಿಹಾರ ಕಂಡುಕೊಳ್ಳಲು ಸಾಮೂಹಿಕ ಪ್ರಯತ್ನಗಳು ಅಗತ್ಯವಾಗಿರುವುದರಿಂದ, ಅಕ್ಟೋಬರ್ 24ರಂದು ಆಚರಿಸಲಾದ ವಿಶ್ವಸಂಸ್ಥೆ ದಿನದ ಸಂದರ್ಭದಲ್ಲಿ ಜಾಗತಿಕ ಏಕತೆಗೆ ಉತ್ತೇಜನ ನೀಡುವುದು ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande