
ಬೆಂಗಳೂರು, 24 ಅಕ್ಟೋಬರ್ (ಹಿ.ಸ.):
ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ಪರಸ್ಪರ ಒಳೇಟು, ಕಳ್ಳಾಟ ಹಾಗೂ ಬ್ಲ್ಯಾಕ್ಮೇಲ್ ರಾಜಕಾರಣ ನಡೆಯುತ್ತಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಕಾಣದ ಅತ್ಯಂತ ಅಸಹ್ಯಕರ ಒಳಯುದ್ಧ ಕಾಂಗ್ರೆಸ್ನಲ್ಲಿ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್ ನಾಯಕರು ಜನಸೇವೆಯನ್ನು ಮರೆತು ಅಧಿಕಾರದ ಕುರ್ಚಿ ಹಿಡಿಯಲು ಹಾಗೂ ಉಳಿಸಿಕೊಳ್ಳಲು ಸ್ವಪಕ್ಷೀಯರ ವಿರುದ್ಧವೇ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಒಬ್ಬರನ್ನೊಬ್ಬರು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್ ನಾಯಕರು ಹೂನ್ನಾರ ನಡೆಸುತ್ತಿದ್ದು, ಬ್ಲ್ಯಾಕ್ಮೇಲ್ ರಾಜಕಾರಣದ ಪರಮಾವಧಿ ತಲುಪಿದ್ದಾರೆ. ರಹಸ್ಯವಾಗಿ ವಿಡಿಯೊ ಚಿತ್ರೀಕರಿಸಿ ಅದನ್ನೇ ಬ್ಲ್ಯಾಕ್ಮೇಲ್ ಅಸ್ತ್ರವಾಗಿ ಬಳಸುವುದು ಅವರ ನಿತ್ಯದ ಕಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ಅಧಿಕಾರದ ಮೇಲಿನ ದುರಾಸೆಯಿಂದ ರಾಜ್ಯದ ಜನರು ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ, ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ಅವಧಿ ಮುಗಿಯುವ ಹಂತದಲ್ಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಈ ಒಳಜಗಳ ಮತ್ತು ರಾಜಕೀಯ ಕಳ್ಳಾಟಕ್ಕೆ ಜನರೇ ತಕ್ಕ ಪಾಠ ಕಲಿಸುವ ಸಮಯ ಬಂದಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.