
ಬಳ್ಳಾರಿ, 23 ಅಕ್ಟೋಬರ್ (ಹಿ.ಸ.)
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆಗಳ ಹುದ್ದೆಗಳ ನೇರ ನೇಮಕಾತಿಗಾಗಿ ಅಕ್ಟೋಬರ್ 24 ರಿಂದ 27 ರವರೆಗೆ ನಡೆಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಳ್ಳಾರಿ ಜಿಲ್ಲಾಡಳಿತವು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ತಿಳಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಇಎಸ್ಐಸಿ ವೈದ್ಯಕೀಯ ಸೇವೆಗಳು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಭೂಮಾಪನ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪರೀಕ್ಷೆಗಳು ನಗರದಲ್ಲಿ ಸುಗಮವಾಗಿ ನಡೆಯಲು ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
*ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ:*
ದೂರದ ಊರುಗಳಿಂದ ಪರೀಕ್ಷೆ ಬರೆಯಲು ಬರುವ ಅಭ್ಯರ್ಥಿಗಳಿಗಾಗಿ ಅಕ್ಟೋಬರ್ 24 ರಿಂದ 26 ರವರೆಗೆ ನಗರದ ಕೌಲ್ ಬಜಾರ್ನಲ್ಲಿರುವ ಸ್ಟೇಡಿಯಂ ರಸ್ತೆಯ ವಾಲ್ಮೀಕಿ ಭವನದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಮಾಹಿತಿಗಾಗಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಾಷು (ಮೊ: 9942451535) ಅವರನ್ನು ಸಂಪರ್ಕಿಸಬಹುದಾಗಿದೆ.
*ಪರೀಕ್ಷಾರ್ಥಿಗಳಿಗೆ ಪ್ರಮುಖ ಸೂಚನೆಗಳು:*
ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಸಮಯಕ್ಕಿಂತ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಬೇಕು. ಪ್ರವೇಶ ಪತ್ರದೊಂದಿಗೆ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಂತಹ ಅಧಿಕೃತ ಭಾವಚಿತ್ರವಿರುವ ಗುರುತಿನ ದಾಖಲೆ ತರುವುದು ಕಡ್ಡಾಯ.
ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಸುತ್ತಮುತ್ತಲಿನ ಜೆರಾಕ್ಸ್ ಹಾಗೂ ಇಂಟರ್ನೆಟ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಆದೇಶಿಸಲಾಗಿದೆ.
*ಜಿಲ್ಲಾಡಳಿತದಿಂದ ಕೈಗೊಂಡ ಕ್ರಮಗಳು:*
ಪರೀಕ್ಷಾ ಕೇಂದ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗೌಪ್ಯ ಸಾಮಗ್ರಿಗಳ ಸಾಗಣೆಗೆ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪ್ರತಿಯೊಂದು ಕೇಂದ್ರಕ್ಕೂ ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ. ಖಜಾನೆ ಆವರಣದಲ್ಲಿ 24/7 ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ.
ಅಭ್ಯರ್ಥಿಗಳಿಗೆ ಸಾರಿಗೆ ತೊಂದರೆಯಾಗದAತೆ ಕೆ.ಕೆ.ಆರ್.ಟಿ.ಸಿ ವತಿಯಿಂದ ನಿಗದಿತ ಸಮಯಕ್ಕೆ ತಲುಪಲು ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಗಾಳಿ-ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಜೆಸ್ಕಾಂ ವತಿಯಿಂದ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.
ಪ್ರತಿಯೊಂದು ಕೇಂದ್ರದಲ್ಲಿ ಥರ್ಮಲ್ ಸ್ಕಾö್ಯನರ್, ಪಲ್ಸ್ ಆಕ್ಸಿಮೀಟರ್ ಮತ್ತು ಪ್ರಥಮ ಚಿಕಿತ್ಸಾ ಪೆಟ್ಟಿಗೆಯೊಂದಿಗೆ ಇಬ್ಬರು ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ http://kea.kar.nic.in ಗೆ ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್