
ಬೆಂಗಳೂರು, 21 ಅಕ್ಟೋಬರ್ (ಹಿ.ಸ.):
ಭಾರತೀಯ ಸೇನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶದಿಂದ ಬೆಂಗಳೂರು ನೇಮಕಾತಿ ಕಾರ್ಯಾಲಯದ ವತಿಯಿಂದ ಅಕ್ಟೋಬರ್ 31ರಿಂದ ನವೆಂಬರ್ 3ರವರೆಗೆ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಪುರುಷ ಅಭ್ಯರ್ಥಿಗಳಿಗಾಗಿ ಅಗ್ನಿವೀರ್ ನೇಮಕಾತಿ ರ್ಯಾಲಿ ಆಯೋಜಿಸಲಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ವಯೋಮಿತಿ, ಶೈಕ್ಷಣಿಕ ಅರ್ಹತೆ ಹಾಗೂ ಇತರ ಮಾನದಂಡಗಳ ವಿವರಗಳನ್ನು ಬೆಂಗಳೂರು ನೇಮಕಾತಿ ಕಾರ್ಯಾಲಯವು ಫೆಬ್ರವರಿ 13ರಂದು ಪ್ರಕಟಿಸಿತ್ತು. ಜೂನ್ 1ರಿಂದ 12ರವರೆಗೆ ನಡೆದ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಶಾರ್ಟ್ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗೆ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ಬೆಂಗಳೂರು ದಕ್ಷಿಣ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಹಾಗೂ ವಿಜಯನಗರ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು.
ಶಾರ್ಟ್ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರಗಳನ್ನು ವಿತರಿಸಲಾಗಿದ್ದು, ಭಾರತೀಯ ಸೇನೆಯ ಅಧಿಕೃತ ವೆಬ್ಸೈಟ್ www.joinindianarmy.nic.in (https://www.joinindianarmy.nic.in) ಮೂಲಕ ತಮ್ಮ ಪ್ರೊಫೈಲ್ಗೆ ಲಾಗಿನ್ ಆಗಿ ಅಥವಾ ನೋಂದಾಯಿತ ಇಮೇಲ್ ಪರಿಶೀಲಿಸಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಆನ್ಲೈನ್ ಪ್ರವೇಶ ಪರೀಕ್ಷೆ, ರ್ಯಾಲಿ ಸ್ಥಳದಲ್ಲಿ ನಡೆಯುವ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಮತ್ತು ಅಂತಿಮ ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದಿರಿ
ಸೇನಾ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳು ಯಾವುದೇ ದಲ್ಲಾಳಿಗಳು, ಮಧ್ಯವರ್ತಿಗಳು ಅಥವಾ ವಂಚಕರ ಆಮಿಷಗಳಿಗೆ ಬಲಿಯಾಗಬಾರದು ಎಂದು ಬೆಂಗಳೂರು ನೇಮಕಾತಿ ಕಾರ್ಯಾಲಯವು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ. ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಭಾರತೀಯ ಸೇನೆಯ ವೆಬ್ಸೈಟ್ನ್ನೇ ಅವಲಂಬಿಸುವಂತೆ ಸೂಚಿಸಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R