
ವಿಜಯಪುರ, 21 ಅಕ್ಟೋಬರ್ (ಹಿ.ಸ.):
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ತಮ್ಮ ನಡುವಿನ ಭೇಟಿಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಾವುದೇ ರಾಜಕೀಯ ಚರ್ಚೆ ಅಥವಾ ಒಪ್ಪಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯಪುರ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಬ್ಬಿ ಗ್ರಾಮದಲ್ಲಿ ಜೈನ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆವು. ಈ ಸಂದರ್ಭದಲ್ಲಿ ಬಸವರಾಜ ಹೊರಟ್ಟಿ ಸೇರಿದಂತೆ ಹಲವರೊಂದಿಗೆ ತೆರಳಿದ್ದೆವು. ಅಲ್ಲಿನ ಕಾರ್ಯಕರ್ತರೊಬ್ಬರ ಮನೆಯಲ್ಲಿ ಊಟ ಮಾಡಿದ್ದೆವು. ಬಳಿಕ ಮತ್ತೊಬ್ಬರ ಮನೆಗೆ ತೆರಳಿದಾಗ ವಿಜಯೇಂದ್ರ ಅಲ್ಲಿಗೆ ಬಂದಿದ್ದರು. ಅಲ್ಲಿ ರಾಜಕೀಯದ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಯಾವುದೇ ಒಪ್ಪಂದವೂ ಆಗಿಲ್ಲ. ಪರಸ್ಪರ ಭೇಟಿಯಾಗಿ ಸಾಮಾನ್ಯವಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.
ಕಳೆದ 35 ವರ್ಷಗಳಿಂದ ನಾರಾಯಣಸಾ ಬಾಂಢಗೆ ಅವರ ಮನೆಗೆ ಊಟಕ್ಕೆ ಹೋಗುತ್ತಿದ್ದೇನೆ. ನಿನ್ನೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರೂ ಅಲ್ಲಿಗೆ ಬಂದಿದ್ದರು. ಅವರು ಅವರಷ್ಟಕ್ಕೆ ತೆರಳಿದರು, ನಾವು ನಮ್ಮಷ್ಟಕ್ಕೆ ಬಂದೆವು. ರಾಜಕೀಯ ಮಾತುಕತೆಗಳು ನಡೆಯುವುದಿದ್ದರೆ ಗುಪ್ತ ಸ್ಥಳಗಳಲ್ಲಿ ಅಥವಾ ದೆಹಲಿ ಮಟ್ಟದಲ್ಲಿ ನಡೆಯುತ್ತವೆ ಎಂದು ಹೇಳಿದರು.
ತಾವು ದೆಹಲಿಗೆ ತೆರಳುತ್ತಿರುವುದಕ್ಕೆ ರಾಜಕೀಯ ಕಾರಣವಿಲ್ಲ. ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಕಂಚಿನ ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮವಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರು ದೂರವಾಣಿ ಮೂಲಕ ಆಹ್ವಾನಿಸಿದ್ದಾರೆ. ಎರಡು ದಿನ ದೆಹಲಿಯಲ್ಲಿರುವುದಾಗಿ ತಿಳಿಸಿದ ಯತ್ನಾಳ, ಯಾವುದೇ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವುದಿಲ್ಲ ಎಂದರು.
ಬಿಜೆಪಿಗೆ ಮರಳಿ ಸೇರ್ಪಡೆಯಾಗುವ ವಿಚಾರವಾಗಿ ಯಾರ ಬಳಿಯೂ ಅಂಗಲಾಚುವುದಿಲ್ಲ. ತಮಗೆ ಬೇಕಾದವರನ್ನು ಭೇಟಿಯಾಗಿ ಮಾತನಾಡಿ ವಾಪಸ್ ಬರುತ್ತೇನೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ನಿತಿನ್ ಗಡ್ಕರಿ ಅವರಿಗೆ ರೈತರ ಸಮಸ್ಯೆಗಳ ಕುರಿತು ಮನವಿ ಸಲ್ಲಿಸುವ ಉದ್ದೇಶವಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಯತ್ನಾಳ ವಾಗ್ದಾಳಿ
ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಯತ್ನಾಳ, “ಯಾರ್ರೀ ಅವರು? ಪಕ್ಷ ಕಟ್ಟಿದ್ದಾರಾ? ಏನಾದರೂ ಕೆಲಸ ಮಾಡಿದ್ದಾರಾ? ಎಲ್ಲ ಸಿದ್ಧವಾದ ಮೇಲೆ ಬಂದವರು ಇವರು. ನನಗೆ ಬುದ್ಧಿ ಹೇಳುವಷ್ಟು ಅನುಭವ ಇವರಿಗಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿರಿಯ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರ ಕಾಲದಿಂದಲೂ ತಾವು ಪಕ್ಷದಲ್ಲಿ ಕೆಲಸ ಮಾಡಿರುವುದಾಗಿ ಹೇಳಿದ ಅವರು, ವಿಜಯಪುರದ ಮೊದಲ ಬಿಜೆಪಿ ಸಂಸದ ತಾನೇ ಎಂದು ಪ್ರತಿಪಾದಿಸಿದರು. ಇನ್ನೂ ಮೂರು ತಿಂಗಳಲ್ಲಿ ಟೀಕೆ ಮಾಡುವವರ ಬಾಯಿ ಮುಚ್ಚಲಿದೆ ಎಂದು ಹೇಳುವ ಮೂಲಕ ತಮ್ಮ ವಿರುದ್ಧದ ಟೀಕೆಗಳಿಗೆ ತಿರುಗೇಟು ನೀಡಿದರು.
ವಿಜಯದಶಮಿಯಿಂದ ಒಳ್ಳೆಯ ಕಾಲ ಆರಂಭವಾಗಲಿದೆ
ವಿಜಯದಶಮಿಗೆ ಒಳ್ಳೆಯ ಕಾಲ ಬರಲಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತ್ನಾಳ, ತಮಗೆ ಒಳ್ಳೆಯ ಕಾಲ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ಶುಭಾಶಯಗಳನ್ನೂ ಕಳುಹಿಸದ ಕೆಲವರು ಈಗ ‘ಯು ಆರ್ ಗ್ರೇಟ್ ಲೀಡರ್ ಸರ್’, ‘ಹ್ಯಾಪಿ ವಿಜಯದಶಮಿ ಸರ್’ ಎಂದು ಸಂದೇಶ ಕಳುಹಿಸುತ್ತಿದ್ದಾರೆ ಎಂದು ಹೇಳಿದರು.
ಯತ್ನಾಳ ಬಿಜೆಪಿಗೆ ಮರಳಬಹುದು, ಈಗಲೇ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯಗಳನ್ನೂ ಕೆಲವರು ಸಂದೇಶಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು. ಕಳೆದ ವಿಜಯದಶಮಿ ಸಂದರ್ಭದಲ್ಲಿ ಶುಭಾಶಯ ಕಳುಹಿಸದವರೇ ಈಗ ಸಂಪರ್ಕಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿಯಾದರೆ ಪೂರ್ಣ ಅಧಿಕಾರದೊಂದಿಗೆ ಕೆಲಸ ಮಾಡಬೇಕು
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಜಿಲ್ಲೆಗೆ ಸಾಕಷ್ಟು ಅನುದಾನ ಬಂದಿದೆ ಎಂಬ ಹೇಳಿಕೆಗಳ ಕುರಿತು ಪ್ರತಿಕ್ರಿಯಿಸಿದ ಯತ್ನಾಳ, ತಾವು ಒತ್ತಡ ಹೇರಿದ ಕಾರಣ ಅನುದಾನ ದೊರಕಿರಬಹುದು ಎಂದು ಅಭಿಪ್ರಾಯಪಟ್ಟರು. ಆಗ ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ, ಜಗದೀಶ ಶೆಟ್ಟರ್ ಸೇರಿದಂತೆ ಹಲವು ನಾಯಕರು ಇದ್ದರು ಎಂದು ನೆನಪಿಸಿದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಅನೇಕ ನಾಯಕರಿದ್ದಾರೆ. ಆದರೆ ಅವರ ಆಡಳಿತದ ಬಗ್ಗೆ ಈಗ ಎಷ್ಟು ಜನ ನೆನಪಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆ ಎತ್ತಿದ ಅವರು, ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಪೂರ್ಣ ಅಧಿಕಾರದೊಂದಿಗೆ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R