
ಬೆಂಗಳೂರು, 18 ಅಕ್ಟೋಬರ್ (ಹಿ.ಸ.):
ಜೈಲಿನೊಳಗೆ ಹಣ ಕೊಂಡೊಯ್ಯಲು ಅವಕಾಶವಿಲ್ಲ. ಆದರೂ ಮಹಿಳಾ ವಿಚಾರಣಾಧೀನ ಕೈದಿಯೊಬ್ಬಳು ₹11,500 ಹಣವನ್ನು ಬಚ್ಚಿಟ್ಟುಕೊಂಡು ಒಳಗೆ ಪ್ರವೇಶಿಸಲು ಯತ್ನಿಸಿದ್ದಾಳೆ. ಆದರೆ, ಜೈಲು ಸಿಬ್ಬಂದಿಯ ಕಟ್ಟುನಿಟ್ಟಿನ ತಪಾಸಣೆಯಿಂದ ಆಕೆಯ ಪ್ರಯತ್ನ ವಿಫಲವಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ನ್ಯಾಯಾಲಯದ ವಿಚಾರಣೆಗೆ ತೆರಳಿ ವಾಪಸ್ ಬಂದಿದ್ದ ಮಹಿಳಾ ಕೈದಿಯನ್ನು ಜೈಲಿನ ಮುಖ್ಯ ದ್ವಾರದಲ್ಲಿ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಆಕೆಯ ಬಳಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹11,500 ನಗದು ಪತ್ತೆಯಾಗಿದೆ.
ಜೈಲಿನೊಳಗೆ ಈ ಹಣವನ್ನು ಯಾರಿಗೆ ತಲುಪಿಸಲು ಉದ್ದೇಶಿಸಲಾಗಿತ್ತು? ಕೈದಿಗಳ ನಡುವೆ ಅಕ್ರಮ ಹಣಕಾಸು ವಹಿವಾಟು ನಡೆಸಲು ಇದನ್ನು ಬಳಸಲಾಗುತ್ತಿತ್ತೇ? ಎಂಬ ಪ್ರಶ್ನೆಗಳು ಈಗ ಎದ್ದಿವೆ. ಆದರೆ, ಹಣದ ಉದ್ದೇಶದ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ಸಾಗಣೆಯ ಹಿಂದಿನ ಉದ್ದೇಶ ಹಾಗೂ ಇದರಲ್ಲಿ ಬೇರೆಯವರ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಅಕ್ರಮ ಸಾಗಣೆಯ ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ. ಇದೀಗ ನಗದು ಹಣ ಸಾಗಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿರುವುದು ಜೈಲಿನ ಭದ್ರತಾ ಕ್ರಮಗಳ ಕುರಿತು ಮತ್ತೆ ಚರ್ಚೆಗೆ ಕಾರಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R