ವಿದ್ಯುತ್ ತಂತಿ ತಗುಲಿ ಇಬ್ಬರು ಮಕ್ಕಳಿಗೆ ಗಂಭೀರ ಗಾಯ: ಮನೆ ಮಾಲೀಕ, ಬೆಸ್ಕಾಂ ವಿರುದ್ಧ ದೂರು
ಬೆಂಗಳೂರು ಹೊರವಲಯದ ರಾಜಾನುಕುಂಟೆಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮನೆ ಮಾಲೀಕ ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
kids-electric-shock


ಬೆಂಗಳೂರು, 18 ಅಕ್ಟೋಬರ್ (ಹಿ.ಸ.):

ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂಬ ಕನಸಿನೊಂದಿಗೆ ಹಾವೇರಿಯಿಂದ ಬೆಂಗಳೂರಿಗೆ ಬಂದಿದ್ದ ಕುಟುಂಬವೊಂದಕ್ಕೆ ಈಗ ಬರಸಿಡಿಲು ಬಡಿದಂತಾಗಿದೆ.

ಮನೆ ಮುಂದೆ ಆಟವಾಡುತ್ತಿದ್ದ ಐದು ವರ್ಷದ ಮಗ ಹಾಗೂ ತಮ್ಮನನ್ನು ಕರೆದುಕೊಂಡು ಬರಲು ಹೊರಬಂದ 13 ವರ್ಷದ ಅಕ್ಕ, ಇಬ್ಬರೂ ವಿದ್ಯುತ್ ಶಾಕ್ಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆಯ ಅದ್ದೇವಿಶ್ವನಾಥಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೊಟ್ರೇಶಿ ಮತ್ತು ಸುಧಾ ದಂಪತಿಯ ಮಕ್ಕಳಾದ ಅಯಾನ್ ಹಾಗೂ ಸಾನ್ವಿ ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಅಯಾನ್, ಕಟ್ಟಡ ನಿರ್ಮಾಣಕ್ಕೆ ಬಳಸುವ ಲೋಹದ ಅಳತೆ ಟೇಪ್ ಅನ್ನು ವಿದ್ಯುತ್ ತಂತಿಯ ಮೇಲೆ ಹಾಕಿದ್ದಾನೆ ಎನ್ನಲಾಗಿದೆ. ಈ ವೇಳೆ ವಿದ್ಯುತ್ ಪ್ರವಹಿಸಿ ಬಾಲಕನಿಗೆ ಶಾಕ್ ತಗುಲಿದೆ. ತಮ್ಮನನ್ನು ಕರೆದುಕೊಂಡು ಬರಲು ಹೊರಗೆ ಬಂದಿದ್ದ ಅಕ್ಕ ಸಾನ್ವಿಗೂ ವಿದ್ಯುತ್ ಸ್ಪರ್ಶಿಸಿದೆ.

ಈ ಅವಘಡದಲ್ಲಿ ಸಾನ್ವಿಯ ಬಲಗೈಗೆ ತೀವ್ರ ಹಾನಿಯಾಗಿದೆ. ವೈದ್ಯಕೀಯವಾಗಿ ಕೈ ಕತ್ತರಿಸುವ ಪರಿಸ್ಥಿತಿ ಎದುರಾಗಿದೆ ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಬಾಲಕ ಅಯಾನ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ತಾಯಿ ದಿನಸಿ ತರಲು ಮನೆಯಿಂದ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಕೊಟ್ರೇಶಿ ಕುಟುಂಬ ಎರಡೂವರೆ ತಿಂಗಳ ಹಿಂದಷ್ಟೇ ಈ ಮನೆಗೆ ಬಾಡಿಗೆಗೆ ಬಂದಿತ್ತು. ಮನೆ ಮುಂದೆ ವಿದ್ಯುತ್ ತಂತಿ ಹಾದುಹೋಗಿರುವುದನ್ನು ಗಮನಿಸಿದ್ದ ಕೊಟ್ರೇಶಿ, ತಂತಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿಸುವಂತೆ ಮನೆ ಮಾಲೀಕ ಸೋಮಶೇಖರ್ ಅವರಿಗೆ ಮನವಿ ಮಾಡಿದ್ದರಂತೆ. ಆದರೂ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವನ್ನು ಪೋಷಕರು ಮಾಡಿದ್ದಾರೆ.

ಮನೆ ಮಾಲೀಕರು ಹಾಗೂ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಕೊಟ್ರೇಶಿ, ರಾಜಾನುಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮನೆ ಮಾಲೀಕ ಸೋಮಶೇಖರ್ ಹಾಗೂ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರಿಗೆ ಬಂದು ಹೂವಿನ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಈಗ ಮಕ್ಕಳ ಚಿಕಿತ್ಸೆಯೇ ದೊಡ್ಡ ಚಿಂತೆಯಾಗಿದೆ. ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತೆಯಾಗಿದ್ದ ಮಗಳು ಸಾನ್ವಿಯ ಭವಿಷ್ಯದ ಬಗ್ಗೆ ಪೋಷಕರು ಕಣ್ಣೀರಿಡುತ್ತಿದ್ದಾರೆ. ಮಕ್ಕಳಿಗೆ ಈ ಸ್ಥಿತಿ ಬಂದಿದ್ದರೂ ಮನೆ ಮಾಲೀಕರು ಬಂದು ವಿಚಾರಿಸಿಲ್ಲ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.

ಈ ಘಟನೆ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದ್ದು, ಗಾಯಾಳು ಮಕ್ಕಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ. ಬೆಸ್ಕಾಂ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿರುವುದಾಗಿ ಹೇಳಿದ ಅವರು, ಇಂಧನ ಸಚಿವರಿಗೂ ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande