
ಬೆಂಗಳೂರು, 18 ಅಕ್ಟೋಬರ್ (ಹಿ.ಸ.):
ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸುವಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ದಂಡ ವಿಧಿಸಲು ಹಾಗೂ ದುರುದ್ದೇಶಪೂರಿತ ಸುಳ್ಳು ದೂರು ಸಲ್ಲಿಸುವ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮಹತ್ವದ ತಿದ್ದುಪಡಿ ಜಾರಿಗೆ ತಂದಿದೆ.
‘ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026’ರ ಅಡಿಯಲ್ಲಿ ಸೇವೆಗಳ ವಿಳಂಬ, ಲೋಪದೋಷ ಹಾಗೂ ತಪ್ಪಾಗಿ ಅರ್ಜಿ ತಿರಸ್ಕರಿಸುವ ಪ್ರಕರಣಗಳಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
25 ದಿನಗಳ ವಿಳಂಬಕ್ಕೆ ಗರಿಷ್ಠ ₹1,500 ಪರಿಹಾರ
ನಿಗದಿತ ಅವಧಿಯಲ್ಲಿ ಸೇವೆಗಳನ್ನು ಒದಗಿಸಲು ಅಥವಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ವಿಫಲರಾಗುವ ಸಂಬಂಧಪಟ್ಟ ಅಧಿಕಾರಿಗಳಿಂದ ವಿಳಂಬದ ಅವಧಿಗೆ ಅನುಗುಣವಾಗಿ ಪರಿಹಾರ ಮೊತ್ತವನ್ನು ವಸೂಲಿ ಮಾಡಲಾಗುತ್ತದೆ. ಮೊದಲ ಐದು ದಿನಗಳ ವಿಳಂಬಕ್ಕೆ ದಿನಕ್ಕೆ ₹20ರಂತೆ ಗರಿಷ್ಠ ₹100, ಆರರಿಂದ ಹತ್ತು ದಿನಗಳ ವಿಳಂಬಕ್ಕೆ ದಿನಕ್ಕೆ ₹40ರಂತೆ ಗರಿಷ್ಠ ₹300, 11ರಿಂದ 15 ದಿನಗಳ ವಿಳಂಬಕ್ಕೆ ದಿನಕ್ಕೆ ₹60ರಂತೆ ಗರಿಷ್ಠ ₹600 ಪರಿಹಾರ ನಿಗದಿಪಡಿಸಲಾಗಿದೆ.
ಅದೇ ರೀತಿ, 16ರಿಂದ 20 ದಿನಗಳ ವಿಳಂಬಕ್ಕೆ ದಿನಕ್ಕೆ ₹80ರಂತೆ ಗರಿಷ್ಠ ₹1,000 ಹಾಗೂ 21ರಿಂದ 25 ದಿನಗಳ ವಿಳಂಬಕ್ಕೆ ದಿನಕ್ಕೆ ₹100ರಂತೆ ಗರಿಷ್ಠ ₹1,500 ಪರಿಹಾರ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಸೇವೆಗಳಲ್ಲಿ ಲೋಪದೋಷಗಳಿದ್ದರೆ ಅಥವಾ ಸೂಕ್ತ ಕಾರಣವಿಲ್ಲದೆ ಅರ್ಜಿಗಳನ್ನು ತಪ್ಪಾಗಿ ತಿರಸ್ಕರಿಸಿದ್ದರೆ, ಸಂಬಂಧಪಟ್ಟ ಅಧಿಕಾರಿಯಿಂದ ಗರಿಷ್ಠ ₹1,500 ಪರಿಹಾರವನ್ನು ವಸೂಲಿ ಮಾಡಿ ನಾಗರಿಕರಿಗೆ ನೀಡಲಾಗುತ್ತದೆ.
ಹುಸಿ ದೂರು ಸಲ್ಲಿಸಿದರೆ ₹1,500 ದಂಡ
ಸರ್ಕಾರಿ ನೌಕರರಿಗೆ ಕಿರುಕುಳ ನೀಡುವ, ಬೆದರಿಸುವ ಅಥವಾ ಅವರಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಸುಳ್ಳು ಕುಂದುಕೊರತೆಗಳನ್ನು ಸಲ್ಲಿಸುವ ನಾಗರಿಕರ ವಿರುದ್ಧವೂ ಕ್ರಮ ಕೈಗೊಳ್ಳಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂಬುದು ಸಾಬೀತಾದರೆ, ಪ್ರತಿ ಅರ್ಜಿಗೆ ₹1,500 ದಂಡ ವಿಧಿಸಲಾಗುತ್ತದೆ. ಇಂತಹ ತಪ್ಪನ್ನು ಪುನರಾವರ್ತಿಸಿದರೂ ಪ್ರತಿ ಅರ್ಜಿಗೆ ₹1,500 ದಂಡ ವಿಧಿಸಲು ಅವಕಾಶವಿದೆ.
ದಂಡ ವಿಧಿಸುವ ಮೊದಲು ಸಂಬಂಧಪಟ್ಟ ನಾಗರಿಕರಿಗೆ ತಮ್ಮ ಅಹವಾಲು ಮಂಡಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ. ಬಳಿಕ ವಿಧಿಸಲಾದ ದಂಡದ ಮೊತ್ತವನ್ನು ಭೂ ಕಂದಾಯದ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆದ್ಯತೆ
ಸಾರ್ವಜನಿಕ ಸೇವೆಗಳ ವಿತರಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಸಮಯಪಾಲನೆಯನ್ನು ಹೆಚ್ಚಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ. ಸರ್ಕಾರಿ ಸೇವೆಗಳನ್ನು ವಿಳಂಬವಿಲ್ಲದೆ ಒದಗಿಸುವಂತೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸುವುದರ ಜೊತೆಗೆ, ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸುಳ್ಳು ದೂರು ಸಲ್ಲಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R