ಕಾವೇರಿ ಆರತಿ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ
ಶ್ರೀರಂಗಪಟ್ಟಣ, 16 ಅಕ್ಟೋಬರ್ (ಹಿ.ಸ.): ರಾಜ್ಯದಲ್ಲಿ ಬರ ಪರಿಸ್ಥಿತಿ ನಿವಾರಣೆಯಾಗಲಿ, ನಾಡು ಸಮೃದ್ಧಿಯಿಂದ ಬೆಳಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆ
ಕಾವೇರಿ ಆರತಿ ಕಾರ್ಯಕ್ರಮ


ಶ್ರೀರಂಗಪಟ್ಟಣ, 16 ಅಕ್ಟೋಬರ್ (ಹಿ.ಸ.):

ರಾಜ್ಯದಲ್ಲಿ ಬರ ಪರಿಸ್ಥಿತಿ ನಿವಾರಣೆಯಾಗಲಿ, ನಾಡು ಸಮೃದ್ಧಿಯಿಂದ ಬೆಳಗಲಿ ಹಾಗೂ ಜನರಿಗೆ ಒಳಿತಾಗಲಿ ಎಂದು ಕಾವೇರಿ ಮಾತೆಯಲ್ಲಿ ಪ್ರಾರ್ಥಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟಿನ ಬೃಂದಾವನ ಉದ್ಯಾನದಲ್ಲಿ ಶುಕ್ರವಾರ ಕಾವೇರಿ ಮಾತೆಗೆ ಪೂಜೆ ಸಲ್ಲಿಸುವ ಮೂಲಕ ಅವರು ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುಟುಂಬ ಸಮೇತರಾಗಿ ಆಗಮಿಸಿದ ಮುಖ್ಯಮಂತ್ರಿ ಶಿವಕುಮಾರ್ ಅವರು ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿದರು. ಬಳಿಕ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾ ತಂಡಗಳ ಪ್ರದರ್ಶನ ವೀಕ್ಷಿಸಿದರು.

ಧಾರ್ಮಿಕ ದತ್ತಿ ಇಲಾಖೆಯ ಸ್ಥಳೀಯ 13 ವೈದಿಕರ ತಂಡ ದಕ್ಷಿಣ ಭಾರತದ ಸಂಪ್ರದಾಯದಂತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿತು. ಮಂಗಳವಾದ್ಯಗಳೊಂದಿಗೆ ಆರಂಭವಾದ ಪೂಜೆಯಲ್ಲಿ ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ ಹಾಗೂ ಸಂಕಲ್ಪ ನೆರವೇರಿಸಲಾಯಿತು. ಬಳಿಕ ಕಾವೇರಿ ಸ್ತೋತ್ರ ಪಠಣದೊಂದಿಗೆ ತೀರ್ಥ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಲಾಯಿತು.

ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆಯ ನಂತರ ಮೂರು ದಿಕ್ಕುಗಳಲ್ಲಿ ಶಂಖನಾದ ಮೊಳಗಿಸಲಾಯಿತು. ಧೂಪದ ಆರತಿ, ಮಂತ್ರಪುಷ್ಪ ಪಠಣ, ಕುಂಭಾರತಿ, ನಾಗಾರತಿ ಹಾಗೂ ಕಾವೇರಿ ಆರತಿ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಶಂಖನಾದ ಮತ್ತು ಮಂತ್ರಘೋಷಗಳ ನಡುವೆ ಕಾವೇರಿ ಮಾತೆಗೆ ವಿವಿಧ ಬಗೆಯ ಆರತಿ ಬೆಳಗಿದ ವರ್ಣರಂಜಿತ ದೃಶ್ಯವನ್ನು ಕಂಡು ನೆರೆದಿದ್ದ ಜನರು ಭಕ್ತಿ ಪರವಶರಾದರು.

ನಂತರ ವಾರಾಣಸಿಯ ಪುರೋಹಿತ ಓಂ ಮಿಶ್ರಾ ನೇತೃತ್ವದ 15 ಸದಸ್ಯರ ತಂಡ ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ಆರತಿ ಸಲ್ಲಿಸಿತು. ಭಕ್ತಿಗೀತೆಗಳ ಗಾಯನದ ನಡುವೆ ಧೂಪಾರತಿ, ಪಂಚಪ್ರದೀಪ ಆರತಿ, ಸರ್ಪಾರತಿ, ಮಯೂರಪಿಂಛ ಸೇವೆ ಹಾಗೂ ವಿಂಜಾಮರ ಸೇವೆ ನೆರವೇರಿಸಲಾಯಿತು. ಬಳಿಕ ಶಂಖನಾದ ಮೊಳಗಿಸಲಾಯಿತು.

ವಿವಿಧ ಪೂಜಾ ವಿಧಿವಿಧಾನಗಳು, ಮಂತ್ರಘೋಷ ಮತ್ತು ಆರತಿಗಳೊಂದಿಗೆ ನಡೆದ ಕಾರ್ಯಕ್ರಮವು ನೆರೆದಿದ್ದ ಜನರಲ್ಲಿ ಭಕ್ತಿಭಾವ ಮೂಡಿಸಿತು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande