ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮೋಟಾರ್ ಪಂಪ್ಸೆಟ್ ವಿತರಿಸಿದ ಲಕ್ಷ್ಮೀ ಹೆಬ್ಬಾಳಕರ್
ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ; ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಕರೆ
belagavi-motor-pumps


ಬೆಂಗಳೂರು, 16 ಅಕ್ಟೋಬರ್ (ಹಿ.ಸ.):

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರ್ಹ ಫಲಾನುಭವಿಗಳಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮೋಟಾರ್ ಪಂಪ್ಸೆಟ್ಗಳನ್ನು ಅಧಿಕೃತವಾಗಿ ವಿತರಿಸಿದರು.

ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ನೀರಾವರಿ ಸೌಲಭ್ಯ ಕಲ್ಪಿಸುವುದು ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದ ಅರ್ಹ ಫಲಾನುಭವಿಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಮೋಟಾರ್ ಪಂಪ್ಸೆಟ್ಗಳನ್ನು ವಿತರಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು, ರೈತರ ಕೃಷಿ ಚಟುವಟಿಕೆಗಳಿಗೆ ಸೂಕ್ತ ನೀರಾವರಿ ಸೌಲಭ್ಯ ದೊರೆಯುವುದು ಅತ್ಯಂತ ಮಹತ್ವದ್ದಾಗಿದೆ. ರೈತರು ತಮ್ಮ ಕೃಷಿ ಕಾರ್ಯಗಳನ್ನು ಸುಗಮವಾಗಿ ನಿರ್ವಹಿಸಲು ಹಾಗೂ ಉತ್ತಮ ಆದಾಯ ಗಳಿಸಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದು ಹೇಳಿದರು.

ಸರ್ಕಾರದ ಜನಪರ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು. ಅರ್ಹ ಫಲಾನುಭವಿಗಳು ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಂಡು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು.

ವಿಶೇಷವಾಗಿ ಪರಿಶಿಷ್ಟ ಪಂಗಡಗಳ ಸಮುದಾಯದ ಬಾಂಧವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

ಸರ್ಕಾರಿ ಯೋಜನೆಗಳ ಮೂಲಕ ಅರ್ಹರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅವರ ಅಭಿವೃದ್ಧಿಗೆ ನೆರವಾಗುವುದು ಸರ್ಕಾರದ ಬದ್ಧತೆಯಾಗಿದೆ. ಫಲಾನುಭವಿಗಳು ದೊರೆತ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸಬೇಕು ಎಂದು ಅವರು ಆಶಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬೆಳಗಾವಿ ಜಿಲ್ಲಾ ವ್ಯವಸ್ಥಾಪಕ ಸದಾಶಿವ ಭೀಮಗೋಳ, ತಾಲೂಕು ಅಭಿವೃದ್ಧಿ ಅಧಿಕಾರಿ ಬಿ.ಎಂ. ಮಂಜಪ್ಪ, ಕಚೇರಿ ಸಿಬ್ಬಂದಿ ಗಂಗಾಧರ ಜಿರಳೆ ಹಾಗೂ ಅರವಿಂದ ದ್ಯಾಮನಗೌಡರ್ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande