
ಬೆಂಗಳೂರು, 16 ಅಕ್ಟೋಬರ್ (ಹಿ.ಸ.):
ದಸರಾ, ದೀಪಾವಳಿ ಮತ್ತು ಛತ್ ಹಬ್ಬಗಳ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿರ್ವಹಿಸಲು ನೈಋತ್ಯ ರೈಲ್ವೆಯು ಬೆಂಗಳೂರು–ರಂಗಪಾರಾ ನಾರ್ತ್ ನಡುವೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲಿದೆ. ಇದರೊಂದಿಗೆ ಕರ್ನಾಟಕದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ 11 ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು 2027ರ ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು–ರಂಗಪಾರಾ ನಾರ್ತ್ ನಡುವೆ ವಿಶೇಷ ರೈಲು
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಅಸ್ಸಾಂನ ರಂಗಪಾರಾ ನಾರ್ತ್ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ 06559 ಬೆಂಗಳೂರಿನಿಂದ ಅಕ್ಟೋಬರ್ 20ರಿಂದ 24ರವರೆಗೆ ಹಾಗೂ ಮರಳುವ ರೈಲು ಸಂಖ್ಯೆ 06560 ರಂಗಪಾರಾ ನಾರ್ತ್ನಿಂದ ಅಕ್ಟೋಬರ್ 24ರಿಂದ 28ರವರೆಗೆ ಸಂಚರಿಸಲಿದೆ ಎಂದು ತಿಳಿಸಲಾಗಿದೆ.
ರೈಲು ಸಂಖ್ಯೆ 06559 ಬೆಂಗಳೂರಿನಿಂದ ರಾತ್ರಿ 11.40ಕ್ಕೆ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ರಂಗಪಾರಾ ನಾರ್ತ್ ತಲುಪಲಿದೆ. ಮರಳುವ ರೈಲು ಸಂಖ್ಯೆ 06560 ರಂಗಪಾರಾ ನಾರ್ತ್ನಿಂದ ಬೆಳಗ್ಗೆ 4.30ಕ್ಕೆ ಹೊರಟು ಸೋಮವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ.
ವಿವಿಧ ನಿಲ್ದಾಣಗಳಲ್ಲಿ ನಿಲುಗಡೆ
ಎರಡೂ ದಿಕ್ಕಿನಲ್ಲಿ ಸಂಚರಿಸುವ ವಿಶೇಷ ರೈಲುಗಳು ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ಪೇಟೆ, ಕಟಪಾಡಿ, ರೇಣಿಗುಂಟ, ಗುಡೂರು, ಓಂಗೋಲ್, ವಿಜಯವಾಡ, ರಾಜಮಂಡ್ರಿ, ದುವ್ವಾಡ, ಕೊತ್ತವಲಸ, ವಿಜಯನಗರ, ಶ್ರೀಕಾಕುಳಂ ರಸ್ತೆ, ಪಲಾಸ, ಬ್ರಹ್ಮಪುರ, ಖುರ್ದಾ ರಸ್ತೆ, ಭುವನೇಶ್ವರ, ಕಟಕ್, ಬರ್ಧಮಾನ್, ಬೋಲ್ಪುರ್ (ಶಾಂತಿನಿಕೇತನ), ರಾಂಪುರ ಹಾಟ್, ನ್ಯೂ ಫರಕ್ಕಾ, ಮಾಲ್ಡಾ ಟೌನ್, ಬರ್ಸೋಯ್ ಜಂಕ್ಷನ್, ಕಿಶನ್ಗಂಜ್, ಅಲುಬಾರಿ ರಸ್ತೆ, ನ್ಯೂ ಜಲ್ಪೈಗುರಿ ಜಂಕ್ಷನ್, ಜಲ್ಪೈಗುರಿ ರಸ್ತೆ, ನ್ಯೂ ಕೂಚ್ಬೆಹಾರ್, ನ್ಯೂ ಅಲಿಪುರ್ದುವಾರ್, ನ್ಯೂ ಬೊಂಗೈಗಾಂವ್ ಜಂಕ್ಷನ್, ಬಾರ್ಪೇಟಾ ರಸ್ತೆ ಮತ್ತು ರಂಗಿಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ.
ಈ ವಿಶೇಷ ರೈಲುಗಳಲ್ಲಿ ಒಂದು ಪ್ರಥಮ ದರ್ಜೆ ಹವಾನಿಯಂತ್ರಿತ ದ್ವಿತೀಯ ದರ್ಜೆ ಬೋಗಿ, ಆರು ಹವಾನಿಯಂತ್ರಿತ ತೃತೀಯ ದರ್ಜೆ ಬೋಗಿಗಳು, 10 ಮಲಗುವ ವ್ಯವಸ್ಥೆಯ ಬೋಗಿಗಳು, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಹಾಗೂ ಅಂಗವಿಕಲ ಸ್ನೇಹಿ ವ್ಯವಸ್ಥೆಯುಳ್ಳ ಎರಡು ದ್ವಿತೀಯ ದರ್ಜೆ ಸಾಮಾನು ಮತ್ತು ಬ್ರೇಕ್ ವ್ಯಾನ್ಗಳು ಸೇರಿದಂತೆ ಒಟ್ಟು 23 ಬೋಗಿಗಳಿರಲಿವೆ.
11 ರೈಲುಗಳ ತಾತ್ಕಾಲಿಕ ನಿಲುಗಡೆ ವಿಸ್ತರಣೆ
ಈ ಹಿಂದೆ ಅಕ್ಟೋಬರ್ 15ರವರೆಗೆ ನಿಗದಿಪಡಿಸಲಾಗಿದ್ದ ವಿವಿಧ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ 2027ರ ಏಪ್ರಿಲ್ 15ರವರೆಗೆ ವಿಸ್ತರಿಸಲಾಗಿದೆ. ನಿಲುಗಡೆ ವಿಸ್ತರಿಸಲಾದ ರೈಲುಗಳ ವಿವರ ಹೀಗಿದೆ:
1. ಕೆಎಸ್ಆರ್ ಬೆಂಗಳೂರು–ಸಿಂಧನೂರು–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (17391/17392): ರಾಮಗಿರಿ ಮತ್ತು ಚಳಗೇರಿ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ.
2. ಯಶವಂತಪುರ–ಬಿಕಾನೇರ್–ಯಶವಂತಪುರ ಎಕ್ಸ್ಪ್ರೆಸ್ (16587/16588): ಬೀರೂರು ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
3. ಕೆಎಸ್ಆರ್ ಬೆಂಗಳೂರು–ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (20651/20652): ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ನಿಲುಗಡೆ ಮುಂದುವರಿಯಲಿದೆ.
4. ಯಶವಂತಪುರ–ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್ಪ್ರೆಸ್ (20689/20690): ಚಿಕ್ಕಬಾಣಾವರ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
5. ಕೆಎಸ್ಆರ್ ಬೆಂಗಳೂರು–ಕಾರವಾರ–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16595/16596): ಕುಣಿಗಲ್ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
6. ಚಿಕ್ಕಮಗಳೂರು–ಯಶವಂತಪುರ–ಚಿಕ್ಕಮಗಳೂರು ಎಕ್ಸ್ಪ್ರೆಸ್ (16239/16240): ಸಂಪಿಗೆ ರಸ್ತೆ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
7. ತಾಳಗುಪ್ಪ–ಮೈಸೂರು ಎಕ್ಸ್ಪ್ರೆಸ್ (16228): ಮಲ್ಲೇಶ್ವರಂ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
8. ಮೈಸೂರು–ತಿರುವನಂತಪುರಂ ಉತ್ತರ–ಮೈಸೂರು ಎಕ್ಸ್ಪ್ರೆಸ್ (16315/16316): ಮದ್ದೂರು ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
9. ಕೆಎಸ್ಆರ್ ಬೆಂಗಳೂರು–ಅಶೋಕಪುರಂ ಮೆಮು ರೈಲು (66553): ಕೃಷ್ಣದೇವರಾಯ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
10. ಮರಿಕುಪ್ಪಂ–ಕೆಎಸ್ಆರ್ ಬೆಂಗಳೂರು–ಮರಿಕುಪ್ಪಂ ಮೆಮು ರೈಲು (66519/66520): ದೇವನಗೊಂದಿ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ.
11. ಬಂಗಾರಪೇಟೆ–ಕೆಎಸ್ಆರ್ ಬೆಂಗಳೂರು ಮೆಮು ರೈಲು (16521): ದೇವನಗೊಂದಿ ನಿಲ್ದಾಣದಲ್ಲಿ ನಿಲುಗಡೆ ಮುಂದುವರಿಯಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R