
ಬೆಂಗಳೂರು, 14 ಅಕ್ಟೋಬರ್ (ಹಿ.ಸ.):
ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯನ್ನು ಸ್ವಾವಲಂಬಿ ಮತ್ತು ಸದೃಢಗೊಳಿಸುವ ಉದ್ದೇಶದಿಂದ ಕೈದಿಗಳ ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು, ಮಾರುಕಟ್ಟೆ ವಿಸ್ತರಿಸುವುದು ಹಾಗೂ ಕೈದಿಗಳ ಕೌಶಲ್ಯಾಭಿವೃದ್ಧಿ ಮತ್ತು ಪುನರ್ವಸತಿಗೆ ಆದ್ಯತೆ ನೀಡುವಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.
ಕರ್ನಾಟಕ ಕಾರಾಗೃಹ ಅಭಿವೃದ್ಧಿ ಮಂಡಳಿಯ ಐದನೇ ಸಭೆ ನಡೆಸಿದ ಅವರು, ಕಾರಾಗೃಹಗಳಲ್ಲಿ ತಯಾರಾಗುವ ಉತ್ಪನ್ನಗಳಿಗೆ ಆಕರ್ಷಕ ಪ್ಯಾಕೇಜಿಂಗ್ ವ್ಯವಸ್ಥೆ ಕಲ್ಪಿಸಿ, ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಪರಿಚಯಿಸುವ ಮೂಲಕ ಮಾರಾಟ ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೌಶಲ್ಯಾಭಿವೃದ್ಧಿ ಮತ್ತು ಪುನರ್ವಸತಿಗೆ ಒತ್ತು
ಕೈದಿಗಳಿಗೆ ಆಧುನಿಕ ವೃತ್ತಿಪರ ತರಬೇತಿ ನೀಡುವ ಮೂಲಕ ಅವರ ಕೌಶಲಗಳನ್ನು ಅಭಿವೃದ್ಧಿಪಡಿಸಬೇಕು. ಬಿಡುಗಡೆಯ ನಂತರ ಅವರು ಸ್ವಾವಲಂಬಿ ಜೀವನ ನಡೆಸಲು ಅಗತ್ಯ ಅವಕಾಶಗಳನ್ನು ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಕೈದಿಗಳ ಮಾನಸಿಕ ಪರಿವರ್ತನೆಗೆ ಆದ್ಯತೆ ನೀಡುವ ಉದ್ದೇಶದಿಂದ ಕಲಾ ಚಿಕಿತ್ಸಾ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ವಯಂಸೇವಾ ಸಂಸ್ಥೆಗಳ ಸಹಯೋಗ ಪಡೆಯುವುದು ಹಾಗೂ ವ್ಯಸನಮುಕ್ತ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಸೂಚಿಸಲಾಯಿತು.
ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ
ಕಾರಾಗೃಹಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ಉತ್ಪಾದನೆ ಮತ್ತು ಮಾರಾಟ ಚಟುವಟಿಕೆಗಳನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ತಿಳಿಸಿದರು.
ಕೈದಿಗಳ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಮತ್ತು ಸ್ವಾವಲಂಬನೆಗೆ ಅವಕಾಶ ಕಲ್ಪಿಸುವುದರ ಜತೆಗೆ, ಅವರಿಂದ ತಯಾರಾಗುವ ಉತ್ಪನ್ನಗಳ ಮಾರಾಟದ ಮೂಲಕ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕು. ಈ ಮೂಲಕ ಮಂಡಳಿಯನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಲು ಅಗತ್ಯ ಯೋಜನೆಗಳನ್ನು ರೂಪಿಸುವಂತೆ ಪ್ರಿಯಾಂಕ್ ಖರ್ಗೆ ಸೂಚಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.