ಬೆಂಗಳೂರಿನಲ್ಲಿ ₹2.6 ಕೋಟಿ ಮೌಲ್ಯದ ಚಿನ್ನ ವಶ: ಪಾದದ ಕೆಳಗೆ 28 ಚಿನ್ನದ ಬಾರ್ ಬಚ್ಚಿಟ್ಟಿದ್ದ ನಾಲ್ವರ ಬಂಧನ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ₹2.6 ಕೋಟಿ ಮೌಲ್ಯದ ಚಿನ್ನ ವಶ; ದುಬೈನಿಂದ ಚೆನ್ನೈಗೆ ಕಳ್ಳಸಾಗಣೆ ಶಂಕೆ
bengaluru-airport-gold-smuggling-four-arrested-2-6-crore-gold-seized


ದೇವನಹಳ್ಳಿ, 14 ಅಕ್ಟೋಬರ್ (ಹಿ.ಸ.):

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಾಲ್ವರು ಪ್ರಯಾಣಿಕರನ್ನು ಬಂಧಿಸಿದ್ದಾರೆ.

ಆರೋಪಿಗಳು ತಮ್ಮ ಪಾದಗಳ ಅಡಿಯಲ್ಲಿ ಕಪ್ಪು ಟೇಪ್ನಿಂದ ಚಿನ್ನದ ಬಾರ್ಗಳನ್ನು ಬಿಗಿಯಾಗಿ ಸುತ್ತಿಕೊಂಡು ಸಾಗಿಸಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ಬಂಧಿತರಿಂದ ಸುಮಾರು 2.6 ಕೋಟಿ ರೂ. ಮೌಲ್ಯದ 1.6 ಕೆ.ಜಿ. ತೂಕದ 28 ಚಿನ್ನದ ಬಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚೆನ್ನೈನ ವ್ಯಾಸರ್ಪಾಡಿ ಮೂಲದ ಮೂವರು ಮಹಿಳೆಯರು ಹಾಗೂ ಓರ್ವ ಪುರುಷ ಈ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ರಂಜಾನ್ ಬೇಗಂ ಸಿರಾಜುದ್ದೀನ್, ನಸ್ರಿನ್ ಬಾನು ಸಿರಾಜುದ್ದೀನ್, ಹೈರುನ್ ಫಾತಿಮಾ ಸಿರಾಜುದ್ದೀನ್ ಮತ್ತು ಅಶಾರುದ್ದೀನ್ ಚೆಲ್ಲದುರೈ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ದುಬೈನಿಂದ ಆಗಮಿಸಿದ್ದ ಈ ತಂಡವು ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎನ್ನಲಾಗಿದೆ.

ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ

ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿದ ಗುಪ್ತಚರ ಮಾಹಿತಿ ಹಾಗೂ ಪ್ರಯಾಣಿಕರ ಚಲನವಲನದ ಕುರಿತು ನಡೆಸಿದ ಪ್ರೊಫೈಲಿಂಗ್ ಆಧರಿಸಿ ವಿಮಾನ ನಿಲ್ದಾಣದ ಟರ್ಮಿನಲ್-2ರ ನಿರ್ಗಮನ ದ್ವಾರದಲ್ಲಿ ನಾಲ್ವರನ್ನು ತಡೆದು ತಪಾಸಣೆ ನಡೆಸಲಾಯಿತು.

ಈ ವೇಳೆ ಪಾದಗಳ ಕೆಳಗೆ ಕಪ್ಪು ಟೇಪ್ನಿಂದ ಬಚ್ಚಿಟ್ಟಿದ್ದ 28 ಚಿನ್ನದ ಬಾರ್ಗಳು ಪತ್ತೆಯಾಗಿವೆ. ಕೆಲವು ಚಿನ್ನದ ಬಾರ್ಗಳು ಟ್ರಾಲಿಗಳಲ್ಲಿಯೂ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಚಿನ್ನದೊಂದಿಗೆ 13 ನವೀಕರಿಸಿದ ಮೊಬೈಲ್ ಫೋನ್ಗಳು ಹಾಗೂ ಎಂಟು ಲ್ಯಾಪ್ಟಾಪ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ ಅಂದಾಜು 2.6 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಕಳ್ಳಸಾಗಣೆ ಜಾಲದ ಕುರಿತು ತನಿಖೆ

ವಿಚಾರಣೆ ವೇಳೆ ಆರೋಪಿಗಳು ಅಧಿಕಾರಿಗಳಿಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಈ ಅಕ್ರಮ ಸಾಗಣೆಯ ಹಿಂದೆ ಮತ್ತಷ್ಟು ವ್ಯಕ್ತಿಗಳು ಅಥವಾ ಸಂಘಟಿತ ಜಾಲದ ಕೈವಾಡವಿದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಕಾಯ್ದೆ-1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದುಬೈನಿಂದ ಚಿನ್ನವನ್ನು ತಂದು ಚೆನ್ನೈಗೆ ಸಾಗಿಸುವ ಉದ್ದೇಶವಿತ್ತೇ ಹಾಗೂ ಈ ಕೃತ್ಯದಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande