
ಹೊಸನಗರ, 14 ಅಕ್ಟೋಬರ್ (ಹಿ.ಸ.):
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭದ್ರತೆ ತಲುಪಿಸುವ ಹಾಗೂ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ‘ಸೇವಾ ಸಂಕಲ್ಪ ಅಭಿಯಾನ’ದ ಅಂಗವಾಗಿ ಹೊಸನಗರ ಮಂಡಲದಲ್ಲಿ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ, ಬೈಕ್ ರ್ಯಾಲಿ, ಮಹಿಳಾ ಆರೋಗ್ಯ ಶಿಬಿರ ಹಾಗೂ ದಿವ್ಯಾಂಗರಿಗೆ ನೆರವು ನೀಡುವ ವಿಶೇಷ ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯದ ಬಗ್ಗೆ ಅರಿವು ಹೆಚ್ಚಿಸುವುದು ಹಾಗೂ ಅಗತ್ಯವಿರುವವರಿಗೆ ನೆರವು ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ತಲುಪಿಸುವುದರ ಜೊತೆಗೆ ದಿವ್ಯಾಂಗ ಸಹೋದರ-ಸಹೋದರಿಯರ ಬದುಕಿಗೆ ನೆರವಾಗುವ ಇಂತಹ ಸೇವಾ ಚಟುವಟಿಕೆಗಳು ಸಮಾಜದ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಮತ್ತು ಕರ್ತವ್ಯ ಪ್ರಜ್ಞೆಯನ್ನು ಬೆಳೆಸಲಿ ಎಂದು ಈ ಸಂದರ್ಭದಲ್ಲಿ ಆಶಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಹರತಾಳು ಹಾಲಪ್ಪ, ಸ್ವಾಮಿ ರಾವ್, ಕೆ.ಜಿ. ಕುಮಾರಸ್ವಾಮಿ, ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್,
ಹೊಸನಗರ ಮಂಡಲ ಅಧ್ಯಕ್ಷ ಎನ್. ಸತೀಶ್, ಪ್ರಭಾರಿ ಟಿ.ಡಿ. ಮೇಘರಾಜ್ ಹಾಗೂ ಪ್ರಕೋಷ್ಟ ಪ್ರಭಾರಿ ದತ್ತಾತ್ರಿ ಸೇರಿದಂತೆ ಹಲವು ಪ್ರಮುಖರು, ಜನಪ್ರತಿನಿಧಿಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ,“ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಭದ್ರತೆ ತಲುಪಿಸುವುದು ಹಾಗೂ ದಿವ್ಯಾಂಗ ಸಹೋದರ-ಸಹೋದರಿಯರಿಗೆ ನೆರವಾಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು, ಆರೋಗ್ಯ ಶಿಬಿರಗಳ ಮೂಲಕ ಆರೋಗ್ಯದ ಮಹತ್ವ ತಿಳಿಸುವುದು ಮತ್ತು ಅಗತ್ಯವಿರುವವರಿಗೆ ನೆರವು ನೀಡುವ ಇಂತಹ ಸೇವಾ ಚಟುವಟಿಕೆಗಳು ಸಮಾಜದ ಬಗೆಗಿನ ಕಾಳಜಿ ಹಾಗೂ ಕರ್ತವ್ಯ ನಿರ್ವಹಣೆಗೆ ಪ್ರೇರಣೆಯಾಗಲಿ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R