
ಬೆಂಗಳೂರು, 14 ಅಕ್ಟೋಬರ್ (ಹಿ.ಸ.):
ಜ್ಯೋತಿಷ್ಯ ಹೇಳುವ ನೆಪದಲ್ಲಿ 62 ವರ್ಷದ ವೃದ್ಧೆಯನ್ನು ನಂಬಿಸಿ, ಸುಮಾರು ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದು ವಂಚಿಸಿದ ಆರೋಪದ ಮೇಲೆ ವೆಂಕಟೇಶ್ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ಒಡವೆಗಳನ್ನು ವಾಪಸ್ ಕೇಳಿದಾಗ ಅಪಘಾತದ ನಾಟಕವಾಡಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ವಿಡಿಯೋ ಕಳುಹಿಸಿ ಪರಾರಿಯಾಗಿದ್ದ ಎನ್ನಲಾಗಿದೆ. ಆರೋಪಿಯಿಂದ 200 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅನಾರೋಗ್ಯದ ನೆಪದಲ್ಲಿ ಪರಿಚಯ
62 ವರ್ಷದ ಶಾಂತಮ್ಮ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಜ್ಯೋತಿಷಿ ವೆಂಕಟೇಶ್ ಪರಿಚಯವಾಗಿದ್ದ.
ತಮ್ಮ ಅನಾರೋಗ್ಯದ ಕುರಿತು ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ಆತ ಹೇಳಿದ್ದ. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಶಾಂತಮ್ಮ ಅವರಿಗೆ ಆತನ ಮಾತಿನ ಮೇಲೆ ನಂಬಿಕೆ ಬೆಳೆದಿತ್ತು.
ನಂತರ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಸಲಹೆ ಪಡೆಯಲು ಜ್ಯೋತಿಷಿಯನ್ನು ಹುಡುಕಿಕೊಂಡು ಬಂದಿದ್ದರು. ಆತ ಸಿಗದ ಕಾರಣ ಆಟೋ ಚಾಲಕನ ಬಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡಿ ತೆರಳಿದ್ದರು.
ಬಳಿಕ ಶಾಂತಮ್ಮ ಅವರನ್ನು ಸಂಪರ್ಕಿಸಿದ ವೆಂಕಟೇಶ್, ಬ್ಯಾಟರಾಯನಪುರದಲ್ಲಿರುವ ಅವರ ಮನೆಗೆ ಬರುವಂತೆ ತಿಳಿಸಿದ್ದ.
ಚೌಡೇಶ್ವರಿ ಪೂಜೆಯ ನೆಪದಲ್ಲಿ ವಂಚನೆ
ಮನೆಗೆ ಬಂದ ವೆಂಕಟೇಶ್, ಶಾಂತಮ್ಮ ಅವರಿಗೆ ನಿಂಬೆಹಣ್ಣು ನೀಡಿ ಚೌಡೇಶ್ವರಿ ಪೂಜೆ ಮಾಡಬೇಕು ಎಂದು ಹೇಳಿದ್ದ. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದ ಎನ್ನಲಾಗಿದೆ.
ಇದೇ ನೆಪದಲ್ಲಿ ಪ್ರತಿ ಅಮಾವಾಸ್ಯೆಯಂದು ಮನೆಗೆ ಬರುತ್ತಿದ್ದ ಆತ, ಚಿನ್ನಾಭರಣಗಳನ್ನು ಪಡೆದುಕೊಂಡು ಹೋಗುತ್ತಿದ್ದ. ಹೀಗೆ ಸುಮಾರು ಒಂದು ವರ್ಷದ ಅವಧಿಯಲ್ಲಿ 300 ಗ್ರಾಂ ಚಿನ್ನಾಭರಣಗಳನ್ನು, ಅಂದಾಜು ₹40 ಲಕ್ಷ ಮೌಲ್ಯದ ಒಡವೆಗಳನ್ನು ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.
‘ನಾನು ಸತ್ತೇ ಹೋಗ್ತಿದ್ದೀನಿ’ ಎಂದು ವಿಡಿಯೋ
ಆಗಸ್ಟ್ 19ರಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ಅವರು ತಮ್ಮ ಚಿನ್ನಾಭರಣಗಳನ್ನು ವಾಪಸ್ ನೀಡುವಂತೆ ಕೇಳಿದ್ದರು. ಆಗ ವೆಂಕಟೇಶ್ ಅಪಘಾತಕ್ಕೀಡಾಗಿರುವುದಾಗಿ ಕಥೆ ಕಟ್ಟಿದ್ದ. ತಾನು ಗಂಭೀರ ಅಪಘಾತಕ್ಕೆ ಒಳಗಾಗಿದ್ದು, ಬದುಕುಳಿಯುವ ಸಾಧ್ಯತೆ ಕಡಿಮೆ ಎಂಬಂತೆ ಬಿಂಬಿಸುವ ಎಐ ಮೂಲಕ ಸಿದ್ಧಪಡಿಸಿದ ವಿಡಿಯೋವನ್ನು ಶಾಂತಮ್ಮ ಅವರಿಗೆ ಕಳುಹಿಸಿದ್ದ ಎನ್ನಲಾಗಿದೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದ.
ಇದರಿಂದ ಆತಂಕಗೊಂಡ ಶಾಂತಮ್ಮ ಅವರು ಮಗಳ ಬಳಿ ವಿಷಯ ತಿಳಿಸಿದ್ದರು. ವಿಡಿಯೋವನ್ನು ಪರಿಶೀಲಿಸಿದ ಮಗಳಿಗೆ ಅದು ಎಐ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ಕೃತಕ ವಿಡಿಯೋ ಎಂಬುದು ತಿಳಿದುಬಂದಿದೆ. ಬಳಿಕ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಶಾಂತಮ್ಮ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿ ಬಂಧನ, 200 ಗ್ರಾಂ ಚಿನ್ನ ವಶ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬ್ಯಾಟರಾಯನಪುರ ಪೊಲೀಸರು ಆರೋಪಿ ವೆಂಕಟೇಶ್ನನ್ನು ಬಂಧಿಸಿದ್ದಾರೆ. ಶಾಂತಮ್ಮ ಅವರಿಂದ ಪಡೆದಿದ್ದ 300 ಗ್ರಾಂ ಚಿನ್ನಾಭರಣಗಳ ಪೈಕಿ 200 ಗ್ರಾಂ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನಾಭರಣಗಳ ಪತ್ತೆ ಹಾಗೂ ಪ್ರಕರಣದ ಮುಂದಿನ ತನಿಖೆ ಕುರಿತು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಜ್ಯೋತಿಷ್ಯ ಮತ್ತು ಪೂಜೆಯ ಹೆಸರಿನಲ್ಲಿ ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅಪರಿಚಿತರಿಗೆ ಚಿನ್ನಾಭರಣಗಳನ್ನು ನೀಡುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R