ಪ್ರವಾಸೋದ್ಯಮ ಅಭಿವೃದ್ಧಿಗೆ ‘ಟೂರಿಸಂ ಸ್ಟಾರ್ಟ್ಅಪ್ ಪ್ರೋತ್ಸಾಹ ನೀತಿ’: ಸಚಿವ ಕೆ.ಜೆ. ಜಾರ್ಜ್
ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ, ನವೀನ ತಂತ್ರಜ್ಞಾನಗಳ ಬಳಕೆ ಹಾಗೂ ಯುವ ಉದ್ಯಮಿಗಳಿಗೆ ಹೊಸ ಅವಕಾಶ ಕಲ್ಪಿಸುವ ಉದ್ದೇಶದಿಂದ ‘ಟೂರಿಸಂ ಸ್ಟಾರ್ಟ್ಅಪ್ ಪ್ರೋತ್ಸಾಹ ನೀತಿ’ ರೂಪಿಸಲಾಗುತ್ತಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
tourism-startup-promotion-policy-karnataka-kj-george


ಬೆಂಗಳೂರು, 13 ಅಕ್ಟೋಬರ್ (ಹಿ.ಸ.):

ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಹಾಗೂ ಹೊಸ ಸಾಧ್ಯತೆಗಳ ಆವಿಷ್ಕಾರಕ್ಕೆ ಸ್ಟಾರ್ಟ್ಅಪ್ಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವ ಉದ್ದೇಶದಿಂದ ರಾಜ್ಯ ಪ್ರವಾಸೋದ್ಯಮ ಇಲಾಖೆ ‘ಟೂರಿಸಂ ಸ್ಟಾರ್ಟ್ಅಪ್ ಪ್ರೋತ್ಸಾಹ ನೀತಿ’ ರೂಪಿಸಲು ಮುಂದಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳುವುದು, ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಯುವ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.

ಸ್ಟಾರ್ಟ್ಅಪ್ಗಳಿಗೆ ಹೊಸ ಅವಕಾಶಕರ್ನಾಟಕವು ದೇಶದ ಪ್ರಮುಖ ಸ್ಟಾರ್ಟ್ಅಪ್ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿನ ನಾವೀನ್ಯತೆಯ ಸಾಮರ್ಥ್ಯವನ್ನು ಪ್ರವಾಸೋದ್ಯಮ ಕ್ಷೇತ್ರದೊಂದಿಗೆ ಜೋಡಿಸುವ ಅಗತ್ಯವಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಅಗತ್ಯಗಳು ಮತ್ತು ಸವಾಲುಗಳನ್ನು ಗುರುತಿಸಿ, ಅವುಗಳಿಗೆ ಸೂಕ್ತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್ಅಪ್ಗಳು ಹಾಗೂ ಯುವ ಉದ್ಯಮಿಗಳಿಗೆ ಅವಕಾಶ ಕಲ್ಪಿಸಲಾಗುವುದು.

ಹೊಸ ಆಲೋಚನೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿ, ಪರಿಣಾಮಕಾರಿಯಾದ ಪರಿಹಾರಗಳನ್ನು ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವುದು ನೀತಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಡಿಜಿಟಲ್ ಸೇವೆ, ಸುರಕ್ಷತೆಗೂ ಆದ್ಯತೆಪ್ರವಾಸಿಗರ ಅನುಭವ ಸುಧಾರಣೆ, ಡಿಜಿಟಲ್ ಸೇವೆಗಳು, ಪ್ರವಾಸಿ ತಾಣಗಳ ನಿರ್ವಹಣೆ, ಸುಸ್ಥಿರ ಪ್ರವಾಸೋದ್ಯಮ, ಸ್ವಚ್ಛತೆ, ಸಂಚಾರ ವ್ಯವಸ್ಥೆ, ಸುರಕ್ಷತೆ, ಪ್ರವೇಶಸೌಲಭ್ಯ, ಪ್ರವಾಸಿ ಮಾಹಿತಿ ಮತ್ತು ಸ್ಥಳೀಯ ಅನುಭವಗಳ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೊಸ ಪರಿಹಾರಗಳನ್ನು ರೂಪಿಸುವ ಕುರಿತು ನೀತಿಯಡಿ ಪರಿಶೀಲಿಸಲಾಗುತ್ತದೆ.

ಪ್ರವಾಸೋದ್ಯಮದ ಅಭಿವೃದ್ಧಿ ಎಂದರೆ ಕೇವಲ ಹೊಸ ಪ್ರವಾಸಿ ತಾಣಗಳನ್ನು ಗುರುತಿಸುವುದು ಅಥವಾ ಮೂಲಸೌಕರ್ಯ ನಿರ್ಮಿಸುವುದಕ್ಕೆ ಸೀಮಿತವಲ್ಲ.

ಪ್ರವಾಸಿಗರ ಪ್ರಯಾಣವನ್ನು ಸುಲಭ, ಸುರಕ್ಷಿತ ಮತ್ತು ಸ್ಮರಣೀಯವಾಗಿಸುವ ನವೀನ ಪರಿಹಾರಗಳೂ ಅಗತ್ಯವಾಗಿವೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪ್ರಾಯೋಗಿಕ ಅನುಷ್ಠಾನಕ್ಕೆ ಒತ್ತುಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರದ ನಿರ್ದಿಷ್ಟ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಸ್ಟಾರ್ಟ್ಅಪ್ಗಳಿಂದ ಪರಿಹಾರಗಳನ್ನು ಆಹ್ವಾನಿಸುವ ವ್ಯವಸ್ಥೆ ರೂಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಆಯ್ದ ಪರಿಹಾರಗಳನ್ನು ನಿರ್ದಿಷ್ಟ ಪ್ರವಾಸಿ ತಾಣಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ, ಅವುಗಳ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲಾಗುವುದು.

ಯಶಸ್ವಿಯಾದ ಮಾದರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿಸ್ತರಿಸುವ ಮೂಲಕ ಸ್ಟಾರ್ಟ್ಅಪ್ಗಳಿಗೆ ನೈಜ ಮಾರುಕಟ್ಟೆ ಮತ್ತು ಪ್ರಯೋಗದ ಅವಕಾಶ ದೊರೆಯಲಿದೆ.

ಜತೆಗೆ ಪ್ರವಾಸೋದ್ಯಮ ಇಲಾಖೆಯೂ ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ನೀತಿಯ ಮೂಲಕ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯಮಶೀಲತೆ, ತಂತ್ರಜ್ಞಾನ ಬಳಕೆ ಮತ್ತು ನವೀನ ಆಲೋಚನೆಗಳಿಗೆ ಉತ್ತೇಜನ ನೀಡುವ ಜತೆಗೆ ಪ್ರವಾಸಿಗರಿಗೆ ಉತ್ತಮ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande