
ಹಾವೇರಿ, 13 ಅಕ್ಟೋಬರ್ (ಹಿ.ಸ.):
ರಾಜ್ಯ ಸರ್ಕಾರದಲ್ಲಿ ರಾಜಕೀಯ ಸ್ಥಿರತೆ ಇಲ್ಲದೆ, ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಭ್ರಷ್ಟಾಚಾರ ಮತ್ತು ಆಡಳಿತ ಪಕ್ಷದ ಆಂತರಿಕ ಗುದ್ದಾಟದಿಂದ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ಸ್ಟಿಂಗ್ ಆಪರೇಷನ್ ವಿವಾದವೂ ಹುಟ್ಟಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಣೆಬೆನ್ನೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನ, ಕಾನೂನು ಮತ್ತು ನ್ಯಾಯಾಂಗದ ಸಂಸ್ಥೆಗಳ ಮೇಲೆ ವಿಶ್ವಾಸವಿಟ್ಟು ಅವುಗಳ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಕಾನೂನುಬಾಹಿರ ಹಾಗೂ ಸಂವಿಧಾನಕ್ಕೆ ವಿರುದ್ಧವಾದ ನಡವಳಿಕೆಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಆಘಾತ ಉಂಟುಮಾಡುವುದರ ಜತೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಚುನಾವಣಾ ಸಂದರ್ಭದಲ್ಲಿ ದೂರು ದಾಖಲಿಸುವ ಪ್ರಕ್ರಿಯೆ ಕುರಿತು ಮಾತನಾಡಿದ ಅವರು, ಜನಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಅಧಿಕಾರಿಗಳು ಅಥವಾ ಅಧಿಕೃತ ವ್ಯಕ್ತಿಗಳು ದೂರು ನೀಡಬೇಕಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಅಥವಾ ಖಾಸಗಿ ವ್ಯಕ್ತಿಗಳು ನೇರವಾಗಿ ದೂರು ದಾಖಲಿಸುವ ವಿಚಾರದಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ವೈಫಲ್ಯದ ಆರೋಪ
ರಾಜ್ಯ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದೆ. ಆರಂಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು, ಪಡಿತರ ಚೀಟಿಗಳ ಪರಿಷ್ಕರಣೆ ಮತ್ತು ಉಚಿತ ಅಕ್ಕಿ ವಿತರಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ರಾಜ್ಯದಲ್ಲಿ ಹಿಂದೆಂದೂ ಕಾಣದ ಆರ್ಥಿಕ ಸಂಕಷ್ಟ ಎದುರಾಗಿದೆ. ಲೋಕೋಪಯೋಗಿ, ವಿದ್ಯುತ್ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಗುತ್ತಿಗೆದಾರರಿಗೆ ಕಾಮಗಾರಿಗಳ ಬಿಲ್ ಪಾವತಿಯಾಗದ ಕಾರಣ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಳೆದ ಮೂರು ವರ್ಷಗಳಲ್ಲಿ ನೀರಾವರಿ ಕ್ಷೇತ್ರಕ್ಕೆ ಹೊಸ ಆರ್ಥಿಕ ಅನುದಾನ ನೀಡುವಲ್ಲಿ ಅಥವಾ ಈ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ಗಮನ ಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸರ್ಕಾರದ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗುತ್ತಿರುವ ಸಂದರ್ಭದಲ್ಲಿ ಹೊಸ ವಿವಾದಗಳು ಮತ್ತು ಸ್ಟಿಂಗ್ ಆಪರೇಷನ್ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ರಾಜಕೀಯ ಅಸ್ಥಿರತೆ ಮತ್ತು ಆಡಳಿತ ಪಕ್ಷದ ಆಂತರಿಕ ಸಂಘರ್ಷದಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.
ಕುಡಿಯುವ ನೀರು, ಮೇವು ಪೂರೈಕೆಗೆ ಅನುದಾನ ನೀಡಿ
ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕೊಳವೆಬಾವಿಗಳನ್ನು ಕೊರೆಸುವುದು, ಕೊಳವೆಗಳು ಮತ್ತು ಪಂಪ್‌ಗಳನ್ನು ಒದಗಿಸುವುದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೀರಿನ ವ್ಯವಸ್ಥೆಗಾಗಿ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹಾಗೂ ಮೇವಿನ ಕಿಟ್‌ಗಳನ್ನು ವಿತರಿಸಲು ಪ್ರತಿ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಐದು ಕೋಟಿ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪಾರದರ್ಶಕವಾಗಿರಲಿ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರಬೇಕು. ಪಟ್ಟಿಯಿಂದ ಬಿಟ್ಟುಹೋಗಿರುವ ಅರ್ಹ ಮತದಾರರನ್ನು ಮನೆಮನೆಗೆ ಭೇಟಿ ನೀಡಿ, ಅಗತ್ಯ ದಾಖಲೆಗಳನ್ನು ಪಡೆದು ಮರು ಸೇರ್ಪಡೆ ಮಾಡಬೇಕು. ಮೃತಪಟ್ಟವರು ಹಾಗೂ ಕಳೆದ 20 ವರ್ಷಗಳಿಂದ ಆ ಸ್ಥಳದಲ್ಲಿ ವಾಸವಿಲ್ಲದವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ನೌಕರರು ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕೆಲವು ಕಡೆಗಳಲ್ಲಿ ಮತದಾರರ ಹೆಸರುಗಳನ್ನು ಬದಲಾಯಿಸಿ ಬೇರೆಡೆಗೆ ವರ್ಗಾಯಿಸುವ ಮೂಲಕ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನಮೂನೆ-7ರ ಅಡಿಯಲ್ಲಿ ಯಾವುದೇ ಚುನಾವಣಾಧಿಕಾರಿಗಳು ಅಥವಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಹೆಸರನ್ನು ಅಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಉಚ್ಚ ನ್ಯಾಯಾಲಯದ ಆದೇಶದ ಪ್ರಕಾರ, ನಮೂನೆ-7 ಸಲ್ಲಿಕೆಯಾದ ತಕ್ಷಣವೇ ನೋಟಿಸ್ ನೀಡದೆ ಅಥವಾ ಸೂಕ್ತ ಪರಿಶೀಲನೆ ನಡೆಸದೆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ನೋಟಿಸ್ ನೀಡುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಚುನಾವಣೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಪೊಲೀಸರಿಗೆ ನೇರವಾಗಿ ಖಾಸಗಿ ದೂರು ನೀಡಿ ಪ್ರಥಮ ಮಾಹಿತಿ ವರದಿ ದಾಖಲಿಸುವ ಬದಲು, ಸಂಬಂಧಪಟ್ಟ ಚುನಾವಣಾಧಿಕಾರಿಗಳ ದೂರು ಅಗತ್ಯವಾಗಿರುತ್ತದೆ ಎಂದು ಬೊಮ್ಮಾಯಿ ವಿವರಿಸಿದರು.
ಈ ಸಂದರ್ಭದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ಅರುಣಕುಮಾರ ಪೂಜಾರಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.