1.10 ಲಕ್ಷ ಸಾರಿಗೆ ನೌಕರರ ₹2,500 ಕೋಟಿ ಪಿಎಫ್ ಹಣ ಬಾಕಿ: ದುರ್ಬಳಕೆ ಆರೋಪ
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸುಮಾರು 1.10 ಲಕ್ಷ ನೌಕರರ ಪಿಎಫ್ ಹಣ ಬಾಕಿ ಉಳಿದಿದೆ ಎಂಬ ಆರೋಪ ಕೇಳಿಬಂದಿದ್ದು, ಹಣದ ಬಳಕೆ ಮತ್ತು ಬಾಕಿ ಪಾವತಿ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.
karnataka-transport-employees-pf-dues-allegations


ಬೆಂಗಳೂರು, 13 ಅಕ್ಟೋಬರ್ (ಹಿ.ಸ.):

ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸುಮಾರು 1.10 ಲಕ್ಷ ನೌಕರರಿಗೆ ಸೇರಿರುವ ₹2,500 ಕೋಟಿಗೂ ಅಧಿಕ ಭವಿಷ್ಯ ನಿಧಿ (ಪಿಎಫ್) ಹಣ ಪಾವತಿಯಾಗದೆ ಬಾಕಿ ಉಳಿದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಈ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ನೌಕರರ ವೇತನದಿಂದ ಕಡಿತಗೊಳಿಸಲಾದ ಪಿಎಫ್ ಮೊತ್ತವನ್ನು ನಿಗದಿತ ಸಮಯದಲ್ಲಿ ಸಂಬಂಧಿತ ಟ್ರಸ್ಟ್ಗೆ ಜಮಾ ಮಾಡಬೇಕಿದೆ. ಆದರೆ, ಈ ಹಣವನ್ನು ಡೀಸೆಲ್ ಖರೀದಿ, ವೇತನ ಪಾವತಿ ಸೇರಿದಂತೆ ನಿಗಮಗಳ ದೈನಂದಿನ ವೆಚ್ಚಗಳಿಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಈ ಕುರಿತು ನೌಕರರ ವಲಯದಲ್ಲಿ ಆತಂಕ ಹೆಚ್ಚಾಗಿದೆ.

ಪಿಎಫ್ ಹಣ ಹಿಂಪಡೆಯಲು ನೌಕರರ ಪರದಾಟನೌಕರರು ತಮ್ಮ ಮಕ್ಕಳ ಶಿಕ್ಷಣ, ವೈದ್ಯಕೀಯ ಚಿಕಿತ್ಸೆ, ಮದುವೆ ಸೇರಿದಂತೆ ತುರ್ತು ಅಗತ್ಯಗಳಿಗಾಗಿ ಪಿಎಫ್ ಹಣ ಹಿಂಪಡೆಯಲು ಅರ್ಜಿ ಸಲ್ಲಿಸುತ್ತಿದ್ದರೂ, ಹಣ ಲಭ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.

ತಮ್ಮ ವೇತನದಿಂದ ಕಡಿತಗೊಂಡ ಹಣವನ್ನೇ ಪಡೆಯಲು ವಿಳಂಬವಾಗುತ್ತಿರುವುದರಿಂದ ಸಾರಿಗೆ ನೌಕರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಬಿಎಂಟಿಸಿಯಲ್ಲೇ ಸಾವಿರ ಕೋಟಿ ರೂ. ಬಾಕಿ?

ವರದಿಗಳ ಪ್ರಕಾರ, ಬಿಎಂಟಿಸಿಯಲ್ಲಿ ಸುಮಾರು ₹1,000 ಕೋಟಿ ಪಿಎಫ್ ಮೊತ್ತ ಬಾಕಿಯಿದೆ ಎನ್ನಲಾಗಿದೆ. ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ಒಟ್ಟು ಸುಮಾರು ₹1,500 ಕೋಟಿ ಬಾಕಿಯಿರುವುದಾಗಿ ವರದಿಯಾಗಿದೆ.

ಈ ಹಣದ ಪಾವತಿ ವಿಳಂಬಕ್ಕೆ ಕಾರಣವೇನು, ಮೊತ್ತವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಹಾಗೂ ಹೊಣೆಗಾರರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಹಣ ಜಮಾ ಮಾಡಲು ಸಂಘಟನೆಗಳ ಆಗ್ರಹ

ಬಾಕಿ ಇರುವ ಪಿಎಫ್ ಹಣವನ್ನು ತಕ್ಷಣವೇ ಸಂಬಂಧಿತ ಟ್ರಸ್ಟ್ಗೆ ಜಮಾ ಮಾಡಬೇಕು. ನೌಕರರ ಭವಿಷ್ಯದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಬೇಕು.

ಹಣ ಪಾವತಿಯಾಗದಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳು ಒತ್ತಾಯಿಸಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande